Tuesday, January 26, 2010

ನೆನಪುಗಳನ್ನೊಮ್ಮೆ ಕೆದಕಿದಾಗ...


ಕಳೆದು ಹೋದ ಸ್ಕೂಲಿನ ದಿನಗಳ ಬಗ್ಗೆ ನೆನಪಿಸಿಕೊಳ್ಳೋದೇ ಒಂದು ಮಜಾ ಅಲ್ವಾ? ಮೊನ್ನೆ ಹೀಗೆ ಅಚಾನಕ್ಕಾಗಿ ಸಿಕ್ಕಿದಳು ’ಹರಟೆ ಕಿಟಕಿ’ ಯಲ್ಲಿ ನನ್ನ ಕಾಲೇಜಿನ ಸಮಯದ ಗೆಳತಿಯೊಬ್ಬಳು. ಮಾತು ಸಂಭಾಷಣೆ ನನ್ನನ್ನು ಹಲವು ವರ್ಷ ಹಿಂದಕ್ಕೆ ಕರೆದೊಯ್ಯಿತು ಹೀಗೇನೇ....

ನಾನು PUC ಓದುತ್ತಿದ್ದ ಸಮಯವದು. ಮೊತ್ತ ಮೊದಲಿಗೆ ಅಪ್ಪ ಅಮ್ಮನಿಂದ ಮನೆಯಿಂದ ದೂರ.. ಹೊಸ ಜಾಗ, ಹೊಸ ಜನ ಹಾಸ್ಟೆಲಿನ ಜೀವನಕ್ಕೆ ಕಾಲಿಟ್ಟಿದ್ದೆ. ನಾವು ನಾಲಕ್ಕು ಜನ ( S,R,N,C) ಹಾಸ್ಟೆಲಿನಲ್ಲಿ ರೂಮ್ ಮೇಟ್ಸ್ ಆಗಿದ್ದೆವು. ಯಾವುದೇ ಗಲಾಟೆ ಗೌಜಿಗಳ ಜಂಜಾಟದಿಂದ ಬಲು ದೂರ ಇದ್ದಿದ್ರಿಂದಲೋ , ಆಗಾಗ ಊರಿಂದ ಬರುವಾಗ ತರುವ ಸ್ವೀಟ್ಸ್‍ಗಳನ್ನು ಅಲ್ಪ ಸ್ವಲ್ಪ ಕೊಡುತ್ತಿದ್ದರಿಂದಲೋ ವಾರ್ಡನ್‍ಗಂತೂ ನಮ್ಮನ್ನು ಕಂಡರೆ ಎನೋ ಅಚ್ಚುಮೆಚ್ಚು. ಬೆಳಗ್ಗೆ ಆರು ಗಂಟೆಗೆ ಸರಿಯಾಗಿ ಕಾಫಿ ತಿಂಡಿಗೆಂದು ವಾರ್ಡನ್ ನಮ್ಮ ರೂಮಿನ ಎದುರಾಗಿಯೇ ಹೋಗುತ್ತಿದ್ದುದು. ನಮ್ಮ ರೂಮಿನಲ್ಲಿ ಆ ಹೊತ್ತಿಗಾಗಲೇ ಎದ್ದು ಓದಲೆಂದು ಡೆಸ್ಕ್‍ನ ಎದುರು ಪ್ರತಿಷ್ಟಾಪನೆ ಆಗಿ ಬಿಡುತ್ತಿದ್ದೆವು. ಆದರೆ ಕುರ್ಚಿಯಲ್ಲೇ ಕೂತು ಆಗಾಗ ತೂಕಡಿಸುತ್ತಿದ್ದಿದ್ದು ವಾರ್ಡನ್‍ಗೆ ಗೊತ್ತಾಗಲೇ ಇಲ್ಲ ಕೊನೆವರೆಗೆ ಬಿಡಿ :-).ಗಲಾಟೆ ಸದ್ದಿಲ್ಲದ ಓದುವ ಹುಡುಗಿಯರೆಂಬ ಹಣೆಪಟ್ಟಿ ಕೊನೆವರೆಗೂ ಖಾಯಮ್ಮಾಗಿಯೇ ಇತ್ತು.

"N" ಒಬ್ಬಳ ಬಿಟ್ಟರೆ ನಾವು ಮೂರ್ವರೂ ೧೦ನೇ ತರಗತಿಯವರೆಗೆ ಕನ್ನಡ ಮೀಡಿಯಂ‍ನಲ್ಲಿ ಕಲಿತವರು ಅಂದ ಮೇಲೆ, PUCಯಲ್ಲಿ ವಿಜ್ಞಾನ ವಿಷಯವನ್ನು ತೆಗೆದುಕೊಂಡ ನಮಗೆ ಭಾಷಾನುವಾದ ಮಾಡಿಕೊಂಡು ಪಾಠ ಅರ್ಥೈಸಿಕೊಳ್ಳುವುದು ಸ್ವಲ್ಪ ದೊಡ್ಡ ಮಟ್ಟಿನ ಕಬ್ಬಿಣದ ಕಡಲೆ ತರವೇ ಅನಿಸಿತ್ತು ಎಂದರೂ ತಪ್ಪಲ್ಲ. ಎಷ್ಟೋ ಸಲ ನಾನಂತೂ ಮನೆಯಿಂದ ತಂದಿದ್ದ ಓ‍ಕ್ಸ್‍ಫ಼ರ್ಡ್ ಡಿಕ್ಷನರಿ ಮುಂದಿಟ್ಟುಕೊಂಡೇ ಅಭ್ಯಾಸ ಮಾಡುತ್ತಿದ್ದೆ. ಅಥವಾ "N" ಹತ್ರ ’ಇದ್ರ ಅರ್ಥ ಏನೇ?’ ಅಂತ ಕೇಳ್ತಿದ್ದೆ.

ಅದೇನೋ ಅರಿಯದ ಪ್ರೀತಿಯ ನಂಟು ದಿನ ಕಳೆದಂತೆ ನಮ್ಮ ನಾಲ್ವರೊಳಗೆ ಬೆಳೆದಿತ್ತು. ಅದೇನೇ ಚಿಕ್ಕ ಪುಟ್ಟ ಭಿನ್ನಾಭಿಪ್ರಾಯವಿರಲಿ ಅದು ನಮ್ಮ ರೂಮಿನ ನಾಲ್ಕು ಗೋಡೆಯನ್ನು ಹೊರ ದಾಟಲು ಎಂದಿಗೂ ಬಿಡ್ತಿರ್ಲಿಲ್ಲ. ಒಬ್ಬರಿಗೊಬ್ಬರೂ ತಮಾಷೆ ಮಾಡಿಕೊಂಡು ಕಳೆದ ಆ ದಿನಗಳು ಅದೆಷ್ಟು ಅಮೂಲ್ಯ ಅನಿಸುತ್ತೆ ಈವಾಗ ನನಗೆ. ಅದರಲ್ಲೂ "Photo Session" ತಮಾಷೆ ಘಟನೆ ನೆನಪಿಸಿಕೊಂಡರೆ ಈಗಲೂ ನಗು ಉಕ್ಕಿ ಬರುತ್ತೆ ನನಗೆ...

ಹೀಗೆ ಒಂದು ದಿನ ನಮಗೆ ನಾಲ್ವರಿಗೂ ಒಟ್ಟಿಗೆ ಸೇರಿ ಫೋಟೋ ತೆಗೆಸಿಕೊಳ್ಳುವ Idea ಬಂತು. "N" ಹೇಗೋ ಏನೋ ತನ್ನ ತಂದೆಯನ್ನ ಪುಸಲಾಯಿಸಿ flash camera ಕೂಡಾ ತಂದ್ಲು ಊರಿಂದ. ಅದಕ್ಕೆ ಪೂರ್ವ ತಯಾರಿ ಹೇಳುವಂತೆ ನಾವೆಲ್ಲರೂ ಊರಿಂದ ಅಮ್ಮನ ಸೀರೆ ತೆಗೆದುಕೊಂಡು ಬಂದಿದ್ದೆವು ಉಟ್ಟುಕೊಳ್ಳಲು. ಎಲ್ಲವೂ ಪ್ಲಾನ್‍ನಂತೆಯೇ ಆಗಿತ್ತು. ಒಂದು ಭಾನುವಾರ ನಾಲ್ವರೂ ಸೀರೆ ಉಟ್ಟುಕೊಂಡು ಕಾಲೇಜಿನ ಕ್ಯಾಂಪಸ್‍ಗೆ ಹೋದೆವು. ಮರ ಹೂಗಿಡಗಳಿಂದ ತುಂಬಿದ ನಮ್ಮ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಫೋಟೋ ತೆಗೆಯಲು ಜಾಗ ಹುಡುಕುವುದು ಏನೂ ಕಷ್ಟ ಅನಿಸಲಿಲ್ಲ ಬಿಡಿ. ಬೇರೆ ಬೇರೆ ಫೋಸ್‍ನಲ್ಲಿ ನಿಂತು ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡೆವು. ಆ ದಿನದ ಖುಷಿ ಹೇಳಲಾಗದಷ್ಟು ಅತಿಯಾಗಿತ್ತು ನಮಗೆ. ಆದರೆ ಅದಕ್ಕಿಂತ ಅತಿಯಾದ surprise ನಮಗಾಗಿ ಕಾದಿತ್ತು ಮುಸು ಮುಸು ನಗುತ್ತಾ !. ಅದರ ಮುಂದಿನ ಶನಿವಾರ ಫೋಟೋ ಪ್ರಿಂಟ್ ಮಾಡಿಸಲು "N" ಕ್ಯಾಮೆರಾ ತೆಗೊಂಡು ಸ್ಟುಡಿಯೋಕ್ಕೆ ಹೋದಾಗಲೇ ಗೊತ್ತಾಗಿದ್ದು ನಮಗೆ ಕ್ಯಾಮೆರಾದಲ್ಲಿ ರೋಲು ಇರಲೇ ಇಲ್ಲ ಎನ್ನುವುದು!!. ನಂತರ ನಮ್ಮ ಪಕ್ಕದ ರೂಮಿನ ಹುಡುಗಿಯರು ಫೋಟೋ ಬಂತಾ ಎಂದು ಕೇಳಿದ್ದಕ್ಕೆ ಫೋಟೋ ಸರಿಯಾಗಿ ಬರಲಿಲ್ಲ ಎಂದು ಹಾರಿಕೆಯ ಉತ್ತರ ಕೊಟ್ಟು ಸುಮ್ಮನಾದೆವು.

ಆ ಎರಡು ವರ್ಷ ಹೇಗೆ ಕಳೆದುಹೋಯಿತೋ ನಮಗೆ ಗೊತ್ತಗಾಗಲೇ ಇಲ್ಲ. ಅದರ ಸಿಹಿ ಅನುಭವ ಈಗ ಮೆಲುಕು ಹಾಕುವುದಷ್ಟೇ ಸಾಧ್ಯ ನಮಗೆ. ಈಗ ಜಗತ್ತಿನ ನಾಲಕ್ಕು ಮೂಲೆಯಲ್ಲಿ ಇರುವ ನಮಗೆ ಮತ್ತೊಮ್ಮೆ ಅಂಥಹ ಕ್ಷಣಗಳನ್ನು ಜೊತೆಯಲ್ಲಿ ನೆನಪಿಸಿ ನಗುವ ಸಮಯ ದೊರೆಯಲಿ ಎನ್ನುವುದೇ ನನ್ನ ಪುಟ್ಟ ಹಾರೈಕೆ.


-


6 comments:

tentcinema said...

ನಮಸ್ಕಾರ,
ಕಲ್ಪನೆಗಳ ನವಿರು ಸಮರ್ಪಕವಾಗಿ ಚಿತ್ರಿತವಾಗಿದೆ. ಶೈಲಿ ಚನ್ನಾಗಿದೆ all the best!
- ಬದರಿನಾಥ ಪಲವಳ್ಳಿ
Pl. visit my Kannada Poems blog:
www.badari-poems.blogspot.com

sublogger said...

ತುಂಬಾ ಧನ್ಯವಾದಗಳು.

-uShai.

guru said...

good writing. one should appreciate.

R@# m@div@l@ said...

i really enjoyed ur hostel life story
i rememerd my hostel and colz days
i met many friz in hostel in during long 14 yera hostel life
am really missing all of them!


nice way of puting the memory
keep writing...........

uShai said...

ಎಲ್ಲರಿಗೂ ನನ್ನ ಬ್ಲಾಗಿಗೆ ಭೇಟಿ ಕೊಟ್ಟು ತಮ್ಮ feedback ನೀಡಿದ್ದಕ್ಕೆ ತುಂಬಾ ಧನ್ಯವಾದಗಳು.

ಹಳೆಯ ಸುಂದರ ನೆನಪುಗಳು ಅವೆಲ್ಲಾ..
ಕಾಡುವವು ಅವುಗಳದೇ ಆದ ಶೈಲಿಯಲಿ...

- ಉಷೈ

Anonymous said...

chenda untu