Monday, December 02, 2013

ಮರಳಿ ಬರಹಗೂಡಿಗೆ ...

ಬಹಳ ದಿನ ಆಯ್ತು ಬಳಪ ಹಿಡಿಯದೆ..
ಮಕ್ಕಳು, ಮನೆ, ಆಫೀಸು ಕೆಲಸಗಳ ಮಧ್ಯೆ ಬರಹ ಮೂಲೆ ಸೇರಿ ಹೊಯ್ತು ಹೇಗೋ...
ಹುಡುಕಿ ಮತ್ತೆ ಲೇಖನಿ ಕೈಯಲ್ಲಿ ಹಿಡಿದಿದ್ದೇನೆ..

ಆದರೆ ಕೆಲವು ಪದಗಳು ಕಾಣೆಯಾಗಿವೆ... ಅವು ಸಿಕ್ಕ ಕೂಡಲೆ ಮರಳಿ ಬರುವೆ... ಖಂಡಿತಾ !!

Tuesday, May 03, 2011

ವೀಕೆಂಡ್‌ ಮಹಾತ್ಮೆ !

[ From Old Archive ]

ಗೊರನೂರಿನ ತಿಮ್ಮರಾಯರು ಊರಿಗೇ ದೊಡ್ಡ ಆಗರ್ಭ ಶ್ರೀಮಂತರು. ಹೇಳಿಕೊಳ್ಳುವ ಹಾಗೆ ಏನೂ ಕಷ್ಟ ಅವರಿಗೆ ಜೀವನದಲ್ಲಿ ಇರಲಿಲ್ಲ.. ಅರಮನೆಯಂತ ಮನೆ, ಮಾತಿಗೆ ತಗ್ಗಿಬಗ್ಗಿ ನಡೆಯೋ ಮಕ್ಕಳು ಸಂಸಾರ... ಇನ್ನೇನು ಬೇಕು? ಆದರೂ ಅವರಿಗೆ ಎರಡು ಆಸೆಗಳು ಯಾವತ್ತೂ ಮನದಲ್ಲೇ ಕೊರೆಯುತ್ತಾ ಇದ್ದವು... ಒಂದು ತಮ್ಮ ಜೀವನದಲ್ಲಿ ಒಮ್ಮೆಯಾದ್ರೂ ಏನಾದ್ರು ಬರೆದು, ಬರಹಗಾರ ಅಂತ ಹೇಳಿಸಿ ಕೊಳ್ಳಬೇಕೂಂತ. ಮತ್ತೆ ಇನ್ನೊಂದು ಎಲ್ಲರೂ ಭಾರಿ ಹೊಗಳುವ (ಮುಖ್ಯವಾಗಿ ಪಕ್ಕದ ಮನೆಯ ಶಾಂತಮ್ಮನ ಮಗಳು ಸೀತ ಅಮೆರಿಕದಿಂದ ಬಂದಾಗಲೆಲ್ಲ ಹೇಳುವ ಕತೆ ಕೇಳಿ!!) ಅಮೆರಿಕಾಕ್ಕೆ ಒಮ್ಮೆ ಭೇಟಿ ಕೊಡ್ಬೇಕೂಂತ.. .. ಪಾಪ ಯಾವುದಕ್ಕೂ ಸಮಯವೇ ಕೂಡಿ ಬರ್ಲಿಲ್ವೋ ಅಥವಾ ಏನು ಬರೆಯಬಹುದೂಂತ ಆಲೋಚಿಸುವುದರಲ್ಲೆ ಆಯುಷ್ಯ ಮುಗುದು ಹೋಯ್ತೋ ಗೊತ್ತಿಲ್ಲ.. ಅಂತೂ ಅವರ ಆಸೆ ನೆರವೇರಲೇ ಇಲ್ಲ.. ಪ್ರಕೃತಿ ನಿಯಮದಂತೆ ಅವರಿಗೂ ಒಂದು ದಿನ ಯಮನ ಕರೆ ಬಂದೇ ಬಿಟ್ಟಿತು...

ಪರಲೋಕದತ್ತ ಯಮದೂತರೊಂದಿಗೆ ಪಯಣ ಬೆಳೆಸುತ್ತಿರುವಾಗ ಅವರ ಮನದಲ್ಲಿ ಪುನಾ ಪೂರ್ಣವಾಗದ ಆಸೆಗಳು ತಲೆಯೆತ್ತತೊಡಗಿದವು.. ಯಮಪುರಿಗೆ ತಲುಪಿದ ಕೂಡಲೆ ಯಥಾಪ್ರಕಾರ ‘ಗುರುತು ಚೀಟಿ (Identity Card)’ ಎಲ್ಲ ಮಾಡಲಾಯಿತು ತಿಮ್ಮರಾಯರಿಗೆ! ಇದೆಲ್ಲಾ ನೋಡಿ ಪರ್ವಾಗಿಲ್ಲ , ಯಮಧರ್ಮರಾಯ ಕೂಡ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾನಲ್ಲಾ ಅನ್ನಿಸ್ತು ಅವ್ರಿಗೆ.

ತಿಮ್ಮರಾಯರ ಜೀವನ ಚರಿತ್ರೆ(Credit History!!) ನೋಡಿ ಯಮಧರ್ಮನಿಗೆ ಅವರ ಮೇಲೆ ಭಾರಿ ಒಳ್ಳೆಯ ಅಭಿಪ್ರಾಯ ಮೂಡಿಬಿಟ್ಟಿತು. ಅವರ ಪರಿಪೂರ್ಣವಾಗದ ಆಸೆ ನೆರವೇರಿಸಿಯೇ ಬಿಡುವಾಂತ ಗ್ರಹಿಸಿ ತಿಮ್ಮರಾಯರಿಗೆ ‘ಎಲೋ ತಿಮ್ಮರಾಯ, ನಿನ್ನ ಒಳ್ಳೆಯತನದ ಜೀವನಕ್ಕೆ ಮೆಚ್ಚಿ ಕೆಲ ದಿನಗಳ ಕಾಲ ಅಮೆರಿಕಕ್ಕೆ ಭೇಟಿ ನೀಡಲು ಒಪ್ಪಿಗೆ ನೀಡುತ್ತಿದ್ದೇನೆ... ಈ ದಿನಗಳಲ್ಲಿ ನಿನಗಾದ ಅನುಭವವನ್ನು ವರದಿಯ ರೂಪದಲ್ಲಿ ಬಂದೊಪ್ಪಿಸು... ಈ ಮೂಲಕ ನಿನ್ನೆರಡೂ ಆಸೆಗಳು ನೆರವೇರಿದಂತಾಗುತ್ತದೆ’ ಅಂತ ಹೇಳಿ 4 ದಿನ ಅಮೆರಿಕಾ ತಿರುಗಾಟಕ್ಕೆ ಪರ್ಮಿಶನ್‌ ಗ್ರಾಂಟ್‌ ಮಾಡೇ ಬಿಟ್ಟ , ಅಲ್ಲದೆ ಹೋಗಲು ಬೇಕಾದ ವ್ಯವಸ್ಠೆ ಕೂಡ...

ವೀಸಾ ಸ್ಟಾಂಪಿಂಗ್‌, ಪಾಸ್‌ಪೋರ್ಟ್‌ ಇತ್ಯಾದಿ ಯಾವುದೇ ಕಿರಿಕಿರಿ ಇಲ್ಲದೆ ಮೊನ್ನೆಯಷ್ಟೇ ಮೆಮೋರಿಯಲ್‌ ವೀಕೆಂಡ್‌ ಹೊತ್ತಿಗೆ ಬಂದ ಅವರ ಅಮೆರಿಕಾ ಪ್ರಯಾಣವೂ ಸುಗಮವಾಗಿ ಸಂಪೂರ್ಣವಾಯಿತು. ಇಲ್ಲಿದೆ ಕೆಳಗೆ ಓದಿ ನೋಡಿ... ಯಥಾವತ್ತಾದ ಅವರ ಅನುಭವ ‘ವರದಿ’!

ಹೀಗೆ ಆಗಿದ್ದು ತಿಮ್ಮರಾಯರ ‘ವೀಕೆಂಡ್‌ ಮಹಾತ್ಮೆ’ಯ ಶುಭೋದಯ!

***

‘ಇತಿ ಶ್ರೀ’ ತಿಮ್ಮರಾಯ ಉವಾಚ :

‘ವೀಕೆಂಡ್‌ ಮಹಾತ್ಮೆ’ ವರದಿ ಓದುತ್ತಿರುವ ಎಲ್ಲಾ ಕನ್ನಡಾಭಿಮಾನಿಗಳಿಗೆ ಗೊರನೂರು ತಿಮ್ಮರಾಯನ ನಮಸ್ಕಾರ!

ಸೀತ, ಅದೇ ನೆರೆಮನೆ ಶಾಂತಮ್ಮನ ಮಗಳು, ವರ್ಷಕ್ಕೊಮ್ಮೆ ಅಮೆರಿಕಾದಿಂದ ಒಂದು ತಿಂಗಳ ರಜೆಗೇ ಅಂತ ಬರ್ತಿದ್ಲು ... ಬಂದಾಗಲೆಲ್ಲ ನನ್ನ ಮನೆಗೆ ಭೇಟಿ ಕೊಟ್ಟು ಒಂದೆರಡು ಘಂಟೆ ನನ್ನತ್ರ ಹರಟೆ ಹೊಡೆಯದೆ ಹೋಗ್ತಿರ್ಲಿಲ್ಲ... ಇದರಿಂದಲೇ ನಂಗೆ ಅಮೆರಿಕಾದಲ್ಲಿ ಜನ ಹೇಗೆ ಇರ್ತಾರೆ... ಅವರ ದಿನಚರಿ ಸಾಮಾನ್ಯ ಹೇಗಿರುತ್ತೆ ಇತ್ಯಾದಿ ಎಲ್ಲ ವಿಷಯ ಗೊತ್ತಾಗಿದ್ದು..

ಅದರಲ್ಲೂ ಅಮೆರಿಕದಲ್ಲಿನ ಜನ ‘ವೀಕೆಂಡ್‌’ ಗೆ ಭಾರಿ ಮಹತ್ವ ಕೊಡ್ತಾರೆ ಅಂತಾನೂ ಗೊತ್ತು.. ವಾರವಿಡೀ ದುಡಿದ ಮೈಮನಕೆ ವಿಶ್ರಾಂತಿ ಬೇಕಲ್ವೇ?

ಸೀತ ಹೇಳಿದಾಗ ನಂಗೆ ಮೊದಲು ನಂಬಿಕೆನೇ ಬರ್ಲಿಲ್ಲ.. ಆದ್ರೆ ಮೊನ್ನೆ ಮೆಮೋರಿಯಲ್‌ ವೀಕೆಂಡಿಗೆ ಅಮೆರಿಕಾಕ್ಕೆ ಭೇಟಿ ಕೊಟ್ಟಾಗ ಸ್ವತಃ ಕಣ್ಣಾರೆ ನೋಡಿ ನಿಜ ಅನ್ನಿಸ್ತು...

ಬಾಪ್‌ ರೆ ಬಾಪ್‌... ಅಮೆರಿಕಾದಲ್ಲಿ ಇಷ್ಟೊಂದು ಜನಾನೂ ಇದ್ದಾರೆ ಅಂತ ವೀಕೆಂಡ್‌ನಲ್ಲಿ ಮಾತ್ರ ಗೊತ್ತಾಗುತ್ತೊ ಏನೋ.. ಅದರಲ್ಲೂ ಶಾಪಿಂಗ್‌ ಮಾಲ್‌, ಬೀಚ್‌ಗಳಿಗೆ ಹೋದ್ರೆ.. ನಂಗಂತೂ ‘ಚಿನ್ನಾರಿ ಮುತ್ತ’ ಸಿನೆಮಾದ ‘ಎಷ್ಟೊಂದು ಜನ ಇಲ್ಲಿ ಯಾರು ನನ್ನೋರು...’ ಹಾಡು ಜ್ಞಾಪಕಕ್ಕೆ ಬಂತು!!.

ಕೈಯಲ್ಲಿ ಕ್ಯಾಶ್‌ ಇಲ್ಲದಿದ್ರೆ ಏನಾಯ್ತು... ಕ್ರೆಡಿಟ್‌ ಕಾರ್ಡ್‌ ಇದೆಯಲ್ಲಾ... ಬಿಲ್‌ ಕಟ್ಟುವಾಗ ಆಲೋಚಿಸಿದ್ರೆ ಆಯ್ತು.. ಅಥವಾ ತೆಗೊಂಡ ವಸ್ತು ಇಷ್ಟ ಆಗಿಲ್ವಾ.. ಅದಕ್ಕೂ ತೊಂದರೆ ಇಲ್ಲ ಬಿಡಿ.. 15 ದಿವಸದೊಳಗೆ ವಾಪಸ್‌ ರಿಟರ್ನ್‌ ಮಾಡಿದ್ರೆ ಸರಿ...

ಈ ಕಂಪನಿಗಳಿಗೂ ಗೊತ್ತು ಬಿಸಿನೆಸ್‌ ಸ್ಟ್ರಾಟಜಿ... ಏನೇ ಡಿಸ್ಕೌಂಟ್‌ ಇರ್ಲಿ.. ಎಲ್ಲ ‘ವೀಕೆಂಡ್‌ ಸೇಲ್‌’! ಅದಕ್ಕೆ ತಾಳಕ್ಕೆ ತಾಳ ಸೇರಿಸಿದಾಂಗೆ ಎಲ್ಲಾ ಹಬ್ಬ-ರಾಜಕೀಯ ಆಚರಣೆಗಳೂ ‘ವೀಕೆಂಡ್‌’ ನಲ್ಲೇ. ಅದು ಅಪ್ಪಂದ್ರ ದಿನವಿರಲಿ ಅಥವಾ ಅಮ್ಮಂದಿರ ದಿನವಿರಲಿ...

ಸೆಲ್‌ಫೋನ್‌ ಕಂಪನಿಗಳೂ ಇದಕ್ಕೆ ಹೊರತಿಲ್ಲ... ಏನೇ ಪ್ಲಾನ್‌ ಇರಲಿ ದೊಡ್ಡಕ್ಷರದಿ Unlimited Weekend Minutes ಅಂತ ತಮ್ಮ ಜಾಹೀರಾತಿನಲ್ಲಿ ಬರೆಯೋಕ್ಕೆ ಮರೆಯಲ್ಲ.. ಟಿವಿ ನ್ಯೂಸ್‌, Weather Reportನಲ್ಲೂ ‘ವೀಕೆಂಡ್‌ ವೆದರ್‌’ಗೇ ಭಾರಿ ಒತ್ತು...

ಶುಕ್ರವಾರ ಬಂದರೆ ಸಾಕು ಎಲ್ಲ ಬಾಯಲ್ಲೂ ಒಂದೇ ಸಾಮಾನ್ಯ ಪ್ರಶ್ನೆ ‘ಈ ವೀಕೆಂಡ್‌ ಏನು ಮಾಡ್ತಾ ಇದ್ದೀರಿ ? ಏನು ಪ್ಲಾನ್‌?’ ಅಂತ...

ಅಲ್ಲಿಗೆ ಮುಗಿಯಿತೇ? ಇಲ್ಲ... ಸೋಮವಾರ ಮತ್ತೆ ಪ್ರಶ್ನೆ ‘ವೀಕೆಂಡ್‌ ಹೇಗಿತ್ತು ?’... ಅಪ್ಪಿತಪ್ಪಿ ಏನಾದ್ರೂ ಬಾಸ್‌ ಅಥವಾ ಮೇನೇಜರ್‌ ವೀಕೆಂಡ್‌ ಆಫೀಸಿಗೆ ಬರ್ಲಿಕ್ಕೆ ಅಂದ್ರೆ ಸಾಕು, ಎಲ್ಲಾ ಪ್ಲಾನ್‌ ಚೌಪಟ್‌... ಮನೆಯಲ್ಲಿ ಇರೋ ಹೆಂಡತಿಯರಿಂದ ಗಂಡಂದ್ರಿಗೆ ‘ಏನ್ರೀ, ವೀಕೆಂಡ್‌ನಲ್ಲೂ ನಿಮ್ಗೆ ಕೆಲಸ... ಎಲ್ಲೂ ಹೊರಗೆ ಹೋಗೋ ಹಾಂಗಾನೆ ಇಲ್ಲ’ ಎಂಬ ಗೋಳು ಬೇರೆ...

ನಾನು ಅಮೆರಿಕಾದಲ್ಲಿ ಇದ್ದ 4 ದಿನವೂ ಗುಜರಾತಿ ಪಟೇಲ್‌ನ ಮೊಟೇಲ್‌ ಒಂದರಲ್ಲಿ ತಂಗಿದ್ದೆ... ‘ಮೆಮೋರಿಯಲ್‌ ವೀಕೆಂಡ್‌ ಸ್ಪೆಶಲ್‌’ ಅಂತ ರೂಮಿನ ರೇಟಿನಲ್ಲೂ ಸಿಕ್ಕಿತ್ತು ಸ್ಪೆಶಲ್‌ ಡಿಸ್ಕೌಂಟ್‌!!

ಆ 4 ದಿನ ತುಂಬಾ ಮಜವಾಗಿತ್ತು... ಆದ್ರೂ ಜನ ‘ವೀಕೆಂಡ್‌’ಗೆ ಇಷ್ಟೊಂದು ಬೆಲೆ ಕೊಡೋಕೆ ವಾರ ತುಂಬಾ ಇರೋ ಕೆಲಸದ ಒತ್ತಡ ಮೂಲ ಕಾರಣವೇ? ಅಥವಾ ಬೇರೆ ಯಾವುದಾದ್ರೂ ಕಾರಣವಿದೆಯೇ ಅಂತ ನಿರ್ಧಾರಕ್ಕೆ ಬರಲು ನನಗೆ ಸಾಧ್ಯವೇ ಆಗಲಿಲ್ಲ... ನೀವು ಏನಂತೀರಾ ಇದಕ್ಕೆ?

‘ಇತಿಶ್ರೀ’ ತಿಮ್ಮರಾಯ ವಿರಚಿತ ‘ವೀಕೆಂಡ್‌ ಮಹಾತ್ಮೆ’ ವರದಿ ಸಂಪೂರ್ಣಮ್‌।।

***

ಹೇಗನ್ನಿಸಿತು ನಿಮಗೆ ತಿಮ್ಮರಾಯರ ‘ವೀಕೆಂಡ್‌ ಮಹಾತ್ಮೆ’ ? ಜೀವನದಲ್ಲಿ ಪ್ರಪ್ರಥಮ ಬಾರಿಗೆ ಬರೆದ ತಮ್ಮ ‘ಬರಹಾಯಣ’ ವಸ್ತು ‘ವೀಕೆಂಡ್‌ ಮಹಾತ್ಮೆ’ ಬಗ್ಗೆ ನಿಮ್ಮಂಥ ಪ್ರಿಯ ಓದುಗರ ಅನಿಸಿಕೆ ತಿಳಿಯಲು ತುಂಬಾ ಕುತೂಹಲದಿಂದಿದ್ದಾರೆ ತಿಮ್ಮರಾಯರು!!

ನಿಮ್ಮ ಅಭಿಪ್ರಾಯಗಳನ್ನು ತಿಳಿಸ್ತೀರಾ? ಮತ್ತೆ ಈ ವರದಿ ನನಗೆ ಹೇಗೆ ಸಿಕ್ತು ಅಂತ ನಿಮಗೆ ಕುತೂಹಲವೇ? ಅದೂ ಒಂದು ದೊಡ್ಡ ‘ತಲೆಹರಟೆ ಮಹಾತ್ಮೆ’ ಕಥೆ ಬಿಡಿ.. ಇನ್ನೊಮ್ಮೆ ಪುರುಸೊತ್ತಲ್ಲಿ ಹೇಳ್ತೇನೆ. ಆಗದೇ?

ಸತ್ಯ ಮಿಥ್ಯಗಳ ನಡುವೆ ಸಿಲುಕಿಹುದು ಈ ಮುಸ್ಸಂಜೆ !

[ From Old Archive ]

ಅದೊಂದು ಸುಂದರವಾದ ಭಾನುವಾರದ ಮುಸ್ಸಂಜೆಯ ಹೊತ್ತು . ವಾರಾಂತ್ಯದ ರೂಢಿಯಂತೆ ಸಬ್ಜಿಮಂಡಿಯಿಂದ ದಿನಸಿ ಖರೀದಿ ಮುಗಿಸಿ ಮನೆಗೆ ವಾಪಾಸು ಬರುತ್ತಿದ್ದೆ. ಆಗಸದತ್ತ ನೋಡಿದರೆ ರಂಗು ರಂಗಿನ ರಂಗೋಲಿ ಬಣ್ಣದ ಓಕುಳಿಯಾಡಿದಂತಿತ್ತು . ಸುತ್ತಮುತ್ತಲ ಆ ವಾತಾವರಣ ನನ್ನಲ್ಲಿ ಹೊಸ ಸ್ಫೂರ್ತಿ ಮೂಡಿಸಿತು. ಮನದಾಳದಲ್ಲಿ ಯೋಚನೆಗಳ ಆಗರವೇ ತುಂಬಲಾರಂಭಿಸಿತು...

ದಿನದ ವಿವಿಧ ಹಂತ ಗತಿಗಳನ್ನು ಆಳವಾಗಿ ನೋಡಿದರೆ ಜೀವನದ ‘ಬಾಲ್ಯ’ವು ದಿನದ ‘ಮುಂಜಾನೆ’ಯಾದರೆ, ‘ಯೌವನ’ವನ್ನು ‘ಮಧ್ಯಾಹ್ನ’ವೆನ್ನಬಹುದು. ‘ಮುಪ್ಪು, ಮುದಿತನ’ವನ್ನು ಬಾಳಿನ ‘ಸಂಜೆ’ ಎನ್ನಬಹುದು ಅಲ್ವೇ?

ಇಲ್ಲಿ ಒಂದು ವಿಷಯ ಗಮನಿಸಿದಿರಾ ? ಮನುಷ್ಯನ ಬದುಕಿನಲ್ಲಿ ‘ಯೌವನ’ ವು ರಂಗು ರಂಗಿನ ಭಾಗವಾದರೆ, ದಿನದ ‘ಮಧ್ಯಾಹ್ನ’ ಬಿಸಿಲು ಧಗೆಯಿಂದ ಕೂಡಿರುವುದು! ಅದೇ ‘ಸಂಜೆ’ ವಿಧವಿಧದ ಬಣ್ಣ ಚೆಲ್ಲಿ, ತಂಪು ತಂಗಾಳಿಯನ್ನು ಬೀಸಿ ಮನಕ್ಕೆ ಮುದ ನೀಡುವುದು. ಎಂಥಾ ವೈಪರೀತ್ಯವಿದು?

ಬೆಳಕು - ಕತ್ತಲೆಗಳ ವಾಸ್ತವಿಕತೆಗಳ ನಡುವೆ ಬರುವ ಈ ತಂಪಿನ ಮುಸ್ಸಂಜೆ ಒಂದು ಭ್ರಮಾಲೋಕವಿದ್ದಂತೆ. ಹೀಗೆಯೇ ಅಲ್ಲವೇ ನಮ್ಮ ಜೀವನ ಕೂಡಾ? ಬದುಕಲ್ಲಿ ಹುಟ್ಟು-ಸಾವು, ಆದಿ-ಅಂತ್ಯಗಳು ವಾಸ್ತವ-ನಿಜವಾದರೂ, ಇವೆರಡರ ನಡುವೆ ಮನುಜನದು ಕನಸುಗಳ ನನಸು ಮಾಡುವತ್ತ ನಡೆದಾಟ, ಅಲೆದಾಟ... ಅದಕ್ಕಾಗಿಯೇ ಕೆಲವೊಮ್ಮೆ ಹೊಡೆದಾಟ...

‘ಸತ್ಯ ಮಿಥ್ಯಗಳ ನಡುವೆ ಸಿಲುಕಿಹುದು ದಿನ ಬದುಕು
ಕೈಗೆಟುಕದ ನಕ್ಷತ್ರಕೆ ಬೇಡಿಹುದು ಮನ ಸಹಜ
ನಕ್ಷತ್ರಿಕ ಬಿಡನಿವನು ಆಸೆಗಳ ಬೆಂಬತ್ತಿ
ಮಾಯಾ ಮರೀಚಿಕೆಗೆ ತಹತಹಿಸಿ ತೊಳಲಾಡೆ
ನಿನಗೆಲ್ಲಿ ನೆಮ್ಮದಿಯು ಹೇಳು ಮನುಜ?’

ಕಣ್ಣಿಗೆ ತೋರುವಂಥವು, ಅನುಭವಕ್ಕೆ ಬರುವಂಥವು ಮಾತ್ರ ನಿಜ, ಉಳಿದೆಲ್ಲವೂ ಸುಳ್ಳು ಅಂದರೆ ಅದೂ ಅರ್ಧ ಸತ್ಯ- ನಾಣ್ಯದ ಒಂದು ಮುಖವಿದ್ದಂತೆ. ಇನ್ನೊಂದು ಮುಖದ ಪರಿಚಯವಾಗುವುದು ಕಣ್ಣಿಗೆ ಕಾಣಲಾರದ ‘ಸತ್ಯ’ ವಿರಬಹುದೇ?

ಸ್ವಾಮಿ ಸಂತರು ಬುಧ್ಧಿಜೀವಿಗಳು ಕಂಡುಕೊಂಡ ಈ ಜ್ಞಾನಸತ್ಯದ ಬಗ್ಗೆ ಮಾತಾಡುವುದು ಖಂಡಿತಾ ಈ ಲೇಖನದ ಉದ್ದೇಶವಲ್ಲ . ಜೀವನದ ಔನ್ನತ್ಯದ ಆಳವನ್ನಿರಿಯಲು ವಾಸ್ತವಿಕತೆ - ಭ್ರಮೆ ಇವೆರಡರ ಅರಿವು ಬೇಕೇ ಬೇಕು ಎಂದು ವಿವರಿಸುವ ಪ್ರಯತ್ನವೇ ಈ ಅಕ್ಷರ ರೂಪ. ‘ಇರುವುದೆಲ್ಲವ ಬಿಟ್ಟು ಇರದುದರೆಡಗೆ ನಡೆವುದೆ ಜೀವನ ’ ಎಂಬ ಚಂಡೆಮದ್ದಳೆಯ ಕವಿ ಗೋಪಾಲಕೃಷ್ಣ ಅಡಿಗರ ‘ಮೋಹನಮುರಳಿ’ ಪದ್ಯದ ಸಾಲುಗಳು ಒಂದರ್ಥದಲ್ಲಿ ಇದೇ ವಿಷಯದ ಮರ್ಮವ ಸಾರುತ್ತವೆಂದು ನನ್ನನಿಸಿಕೆ.

ಸತ್ಯದ ಬೆಲೆಯನ್ನಿರಿಯಲು ಸುಳ್ಳು ಯಾವುದು ಎಂದು ತಿಳಿವುದು ಎಷ್ಟು ಮುಖ್ಯವೋ, ನ್ಯಾಯ - ಅನ್ಯಾಯ, ಬೆಳಕು - ಕತ್ತಲೆ, ವಾಸ್ತವ - ಭ್ರಮೆ ... ಇತ್ಯಾದಿಯೆಲ್ಲವೂ ಸರಿಸಮಾನತೆಯ ಎರಡು ಅವಿಭಾಜ್ಯ ಮುಖಗಳು ಅನ್ನೋದು ದಿಟವಲ್ವೇ?

ಕಾರು ಮನೆ ಮುಂದೆ ನಿಂತಾಗಲೇ ನನ್ನ ಯೋಚನಾಧಾರೆಗೆ ಕ್ಷಣಿಕ ಕಾಲದ ಕಡಿವಾಣ ಬಿದ್ದದ್ದು ! ಮತ್ತೆ ಭ್ರಮೆಯಿಂದ ವಾಸ್ತವಿಕತೆಯ ಕಡೆ ಪಯಣ... ಮರಳಿ ಕನಸುಗಳ ಗೂಡಿಗೆ..

Friday, August 20, 2010

Myers Briggs Personality Types

ಎಷ್ಟೋ ದಿನದಿಂದ ಇದರ ಬಗ್ಗೆ ಬರೆಯಬೇಕು ಅಂದುಕೊಂಡಿದ್ದೆ. ಅಂತೂ ಇವತ್ತು ದಿನ ಕೂಡಿ ಬಂತು ನೋಡಿ. ಸೈಕಾಲಜಿ ಬಗ್ಗೆ ನನಗೆ ಮೊದಲಿಂದಲೇ ಅತಿಯಾದ ಅಭಿರುಚಿ. ಅದರ ಬಗ್ಗೆ ಎಲ್ಲ ವಿಷಯಗಳು ನಾನು ಓದಿ ತಿಳಿದುಕೊಂಡಿದ್ದು ಅಷ್ಟೆ, ಅದರ ಬಗ್ಗೆ ಸೀರಿಯಸ್ಸಾಗಿ ಸ್ಕೂಲಿಗೆ ಹೋಗಿ ಕಲಿತಿಲ್ಲ ಏನನ್ನೂ ಇದುವರೆಗೆ. ಸರಿ ಅದಿರಲಿ, ಈಗ ಮುಖ್ಯ ವಿಷಯಕ್ಕೆ ಬರೋಣ...

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 12 ರಾಶಿಗಳು ( Zodiac Signs ) ಇರುವಂತೆ ಈ ಜಗತ್ತಿನಲ್ಲಿ 16 ನಮೂನೆಯ ಜನರಿರುತ್ತಾರೆ ಎನ್ನುವ ವಿಷಯ ನಿಮಗೆ ಗೊತ್ತೇ? ಅದನ್ನೇ ’ Personality Types ’ ಅನ್ನುವುದು. ಇದು ಸುಮ್ಮನೆ ಆಧಾರಗಳಿಲ್ಲದ ವಿಚಾರವಲ್ಲ; ೪೦ ವರುಷಗಳ ಸಂಶೋಧನೆಯ ಫಲ. ಯಾವುದೇ type ಕೆಟ್ಟದೂ ಅಲ್ಲ ಅಥವಾ ಅತಿಯಾಗಿ ಒಳ್ಳೆಯದೂ ಅಲ್ಲ. ಇದರ ಮೂಲ ಉದ್ದೇಶ ಒಂದು ಬಗೆಯ ಜನರು ಇನ್ನೊಂದು ಬಗೆಯ ಜನರೊಡನೆ ಸಮರಸದಿಂದ ಇರುವುದು ಹೇಗೆ ಎನ್ನುವ ’ಮೂಲಸೂತ್ರ’ ಒದಗಿಸಿಕೊಡುವುದು. ಇದರ ಬಗ್ಗೆ ನನಗೆ ಜಾಸ್ತಿ ಬರೆಯಲು ಇಷ್ಟ ಇಲ್ಲ. ಯಾಕೆಂದರೆ ಇದರ ಬಗ್ಗೆ ಸಾವಿರಾರು ಲಿಂಕುಗಳು ನಿಮಗೆ ಗೂಗಲಿಸಿ ನೋಡಿದರೆ ದೊರೆಯುತ್ತವೆ. ಓದಿ ನೋಡಿ.. ಒಂದು ಲಿಂಕು ನಿಮಗಾಗಿ ಕೊಡುತ್ತಿದ್ದೇನೆ..

ಇನ್ನೂ ಹೀಗೆ ನನಗೆ ತಿಳಿದಿರುವ ವಿಷಯಗಳನ್ನು ಹಂಚಿಕೊಳ್ಳುತ್ತೇನೆ ಇನ್ನು ಕೆಲವೇ ದಿನಗಳಲ್ಲಿ ಮತ್ತೊಮ್ಮೆ ..ಮೊತ್ತೊಂದು ಹೊಸ ವಿಷಯದೊಡನೆ...

Ref: http://en.wikipedia.org/wiki/Myers-Briggs_Type_Indicator

- ಉಷೈ

Thursday, August 12, 2010

’ಮಳೆ-ಕನಸಿನ ದಿನ’

ಆವತ್ತು ಮಳೆ ಧಾರಾಕಾರವಾಗಿ ಹೊರಗೆ ಸುರಿಯುತ್ತಿತ್ತು. ಮನೆಯ ಹಿಂಬದಿಯ ಬಾಲ್ಕನಿ ಬಾಗಿಲು ಮೆಲ್ಲಗೆ ಸರಿಸಿ ಸ್ವಲ್ಪ ಹೊತ್ತು ಹೊರಗೆ ನೋಡುತ್ತಾ ನಿಂತೆ.. ಮರದ ಡೆಕ್ಕಿನ ಮೇಲೆ ಪಟ ಪಟ ಸದ್ದು ಮಾಡುತ್ತ ಬೀಳುವ ಹನಿಗಳು ಅಚ್ಚ ಹೊಸ ತಾಳದಲ್ಲಿ ಒಂದೇ ಸಮನೆ ಸಂಗೀತ ನುಡಿಸಿದಂತೆ ಅನಿಸಿತು. ನನ್ನ ಮೂರು ವರುಷದ ಮಗಳು ತಾನು ಹಿಡಿದಿದ್ದ ಕೊಡೆಯನ್ನು ಗಿರಗಿರನೆ ತಿರುಗಿಸಿ ಹನಿಗಳು ನನ್ನ ಮುಖಕ್ಕೆ ಬಿದ್ದಾಗಲೇ ನನ್ನ ಕನಸಿನ ಪುರವಣಿಗೆ ತೆರೆ ಬಿದ್ದಿದ್ದು. ಅವಳು ಆಚೇಚೆ ಓಡಾಡುತ್ತ ಮಳೆ ಹನಿಗಳೊಂದಿಗೆ ಮುಟ್ಟಾಟ ಆಡುತ್ತಿರುವಳೋ ಎಂದು ಭಾಸವಾಯಿತು. ಒಂದೆಡೆಗೆ ನನಗೆ ಅವಳಂತೆ ಮಳೆಯಲ್ಲಿ ನೆನೆದು ಮುಕ್ತವಾಗಿ ಹನಿಗಳೊಡನೆ ಚಕ್ಕ್ಂದವಾಡಲು ಸಾಧ್ಯವಿಲ್ಲದಿದ್ದುದರ ಬಗ್ಗೆ ಅಸೂಯೆಯ ಭಾವನೆ ಹೀಗೆಯೇ ಸುಳಿಯಿತು ಮನದೊಳಗೆ. ಹಿತ್ತಲಿಗಂಟಿಕೊಂಡು ಇರುವ ಆ ಅಂಕುಡೊಂಕಾದ ಮರ ಗಾಳಿಯ ರಭಸಕ್ಕೆ ಕುಡಿತದ ಅಮಲಿಗೆ ತೂಗುವಂತೆ ಅತ್ತಿತ್ತ ಅಲ್ಲಾಡುತ್ತಿತ್ತು. ಅದರ ಎಲೆಗಳ ಮೇಲೆ ಬಿದ್ದ ಹನಿಗಳು ಪುಟ್ಟ ಮಕ್ಕಳು ಜಾರುಬಂಡಿಯಲಿ ಕೂತು ಜಾರಿದಂತೆ ನೆಲಕ್ಕೆ ಜಾರಿ ಬೀಳುತ್ತಿದ್ದವು.

ಆಸೆ ಹೊತ್ತು ತಂದ ಮಳೆಹನಿಗಳು
ಮನದ ಬಾಗಿಲ ತಟ್ಟಿ ಭುವಿಗರ್ಪಿತವಾದವು
ಎಲೆಗಳ ಮೇಲೆ ಸ್ಪಟಿಕಮಣಿಗಳಂತೆ ತೋರಿ
ಕ್ಷಣದಲ್ಲೇ ಜಾರುತಲಿ ಮಾಯವಾದವು ಯಾಕೋ..

ಕಪ್ಪು ದಟ್ಟವಾದ ಮೋಡಗಳ ಮಧ್ಯದಿಂದ ಸೂರ್ಯ ತನ್ನ ಕಿರಣಗಳ ಸೂಸಲು ಅತಿಯಾಗಿ ಕಷ್ಟ ಪಡುತ್ತಿರುವನೋ ಎಂಬಂತೆ ಕಾಣುತ್ತಿತ್ತು. ಮಳೆಯ ನೀರಿನ ರಭಸಕ್ಕೋ ಏನೋ ಡೆಕ್ಕಿನ ಕೆಳಗೆ ಸಮೀಪದಲ್ಲೇ ಪುಟ್ಟ ಕಾಲುವೆಯಲ್ಲಿ ನೀರು ಹರಿದುಹೋಗಲು ಶುರುವಾಗಿತ್ತು. ಮಗಳು ’boat ಮಾಡಿಕೊಡು’ ಅಂದಾಗ ಬಾಲ್ಯದ ಒಂದೊಂದು ಕ್ಷಣಗಳು ಕಣ್ಣೆದುರೇ ಮೂರ್ತಿವೆತ್ತಂತೆ ಕಾಡಿದವು ಯಾಕೋ ಆ ಹೊತ್ತಿಗೆ.. ಮಳೆಯಲ್ಲಿ ನೆನೆದು ತೊಯ್ದು ಮನೆಯೊಳಗೆ ಬಂದಾಗ ’ಅಯ್ಯಯ್ಯೋ.. ಎಲ್ಲ ಕೊಚ್ಚೆ ಮನೆ ಒಳಗೆ ತರ್ಬೇಡ..ತಲೆ ಒರೆಸ್ತೀನಿ ಬಾ..ಶೀತ ಆಗುತ್ತೆ’ ಅನ್ನುತ್ತಿದ್ದ ಅಮ್ಮನ ಪ್ರೀತಿ,ಕಳವಳ ತುಂಬಿಕೊಂಡ ಗದರಿಕೆಯ ಮಾತುಗಳು ಕಿವಿಯೊಳಗೆ ಗೊಯ್ಯ್‍ಗುಟ್ಟಿದವು ಒಮ್ಮೆ.. मुजकॊ लॊटा दो बचपन का सावन ... वो कागज़ कि कष्टी .. वॊ बारिश का पानि..

ಮರೀಚಿಕೆಯಂತೆ ಅಲ್ಲವೇ ಆ ಸುಂದರ ದಿನಗಳು
ಮುಗ್ಧತೆಯ ಮುಗುಳುನಗು ಆಟಪಾಠಗಳ ಬಿರುಸು
ಒಂದೊಂದು ಘಟನೆಯೂ ಆಹಾ ಅದೆಂಥಹ ಸೊಗಸು ||

ನೀರುಳ್ಳಿ ಬಾಜಿ ಮಾಡಲೆಂದು ಒಲೆಯ ಮೇಲಿಟ್ಟ ಎಣ್ಣೆಯು ಕೊತಕೊತನೆ ಕುದಿದು ಚಟಪಟಗುಟ್ಟಿದಾಗಲೇ ಮಳೆಕನಸಲ್ಲಿ ಮುಳುಗಿದ್ದ ನನಗೆ ಇಹಪ್ರಪಂಚದ ಬಗ್ಗೆ ಅರಿವಾಗಿದ್ದು. ಕೈಯಲ್ಲಿದ್ದ ಗ್ಲಾಸು ನೋಡಿದರೆ ತಣ್ಣಗಾಗಿದ್ದ ’morning coffee’ ಅಣಕಿಸಿ ನಗಾಡಿತು. ಕನಸುಗಳನ್ನೆಲ್ಲ ಮತ್ತೆ ನನ್ನ ಮನದ ಬುಟ್ಟಿಯೊಳಗಿಟ್ಟು ಅಡುಗೆಕೋಣೆಯ ಕಡೆಗೆ ಧಾವಿಸಿದೆ.

ಕನಸುಗಳಿಗೆ ಮತ್ತೆ ಹಬ್ಬ ಇನ್ನೊಮ್ಮೆ ಮಳೆರಾಯ ಭೇಟಿ ಕೊಟ್ಟಾಗ..

- ಉಷೈ

Monday, April 05, 2010

ಆಚಾರವಿಲ್ಲದ ನಾಲಿಗೆ !

ಈ ವಾರದ ವಿಜಯಕರ್ನಾಟಕದ ಸಂಚಿಕೆಯಲ್ಲಿ ಬೆಳೆಗೆರೆ ಬರೆದ ಲೇಖನ ಓದಿದೆ ’madness habits' ಕುರಿತಾಗಿ. ಒಂದೊಂದು ಅಕ್ಷರವೂ ನಿಜ ಅಂತ ಅನ್ನಿಸ್ತು ನನಗೆ.

ನನ್ನ ಪ್ರಕಾರ ಈ ಜಗತ್ತಲ್ಲಿ ಎಲ್ಲರಿಗೂ ಒಂದೊಂದು ರೀತಿಯ ’ಹುಚ್ಚು’ ಅಂದರೆ ತಪ್ಪೆನಿಸದು! ಕೆಲವರಿಗೆ ಓದುವ ಹುಚ್ಚು; ಡಿಗ್ರಿಯ ಮೇಲೆ ಡಿಗ್ರಿ ಪಡೆಯುವ ಹುಚ್ಚು;ಇನ್ನು ಕೆಲವರಿಗೆ ದುಡ್ಡಿನ ಹುಚ್ಚು. ಹೆಣ್ಣು, ಹೊನ್ನು, ಮಣ್ಣು... ಇನ್ನೇನೋ...

ಈಗ ನಾನಿಲ್ಲಿ ಮಾತನಾಡಲು ಹೊರಟಿದ್ದು ’ಮಾತಿನ ಹುಚ್ಚು’ ಇರುವವರ ಬಗ್ಗೆ. ಇವರಿಗೆ ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡಿಕೊಳ್ಳುವುದೇ ಒಂದು ಗೀಳು. ಯಾರದೇ ಮನೆಗೆ ಭೇಟಿ ನೀಡಲಿ, ಅಥವಾ ಮದುವೆ ಮುಂಜಿ ಸಮಾರಂಭಗಳಿಗೆ ಹೋಗಿ ಬರಲಿ, ಅಲ್ಲಿನ ಲೋಪ ದೋಷಗಳನ್ನು ಎತ್ತಿ ಹಿಡಿದು ಮಾತನಾಡದಿದ್ರೆ ರಾತ್ರಿ ನಿದ್ದೆ ಬಾರದು ಇಂಥವರಿಗೆ! ಆದರೆ ಇವರ ’ತಪ್ಪು ಹುಡುಕೋ ಪಾಲಿಸಿ’ ಹೊರಗಿವನರಿಗೆ ಮಾತ್ರ; ತಮಗೆ ಹತ್ತಿರದ ಜನರ ಬಗ್ಗೆ ಸಂಪೂರ್ಣ ಸ್ಪೆಷಲ್ಲು ಡಿಸ್ಕೌಂಟು ಇದೆ! ಅದೇನೋ ಗಾದೆಮಾತು ಇದೆಯಲ್ಲ; ತಮ್ಮ ಕಾಲಬದಿ ಆನೆ ಸತ್ತರೂ ಕಾಣದು ಆದರೆ ಪಕ್ಕದ ಮನೆಲಿ ಇರುವೆ ಸತ್ತ ಬಗ್ಗೆ ಟೀಕೆ ಮಾಡಿದ ಹಾಗೆ.

ನಮ್ಮ ಸುತ್ತ ಮುತ್ತ ಇಂಥಹ ಜನರು ಎಷ್ಟೋ ಸಲ ಕಾಣಲು ಸಿಗಬಹುದು. ಇಂಥವರನ್ನು ಸರಿ ಪಡಿಸಲು ಯಾವ ಔಷಧಿ, ಬೇರು ಕಷಾಯ ಸಿಗದು. ಕಾಲಧರ್ಮವೇ ಪಾಠ ಕಲಿಸಿದರೆ ಸರಿ.

’ಆಚಾರವಿಲ್ಲದ ನಾಲಿಗೆ.. ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ..’!!

- uShai

Tuesday, March 23, 2010

ಹೀಗೊಂದು ಪ್ರೇಮ ಪತ್ರ!

ನನ್ನವಳಿಗೆ,

ನೀನು ಹೋಗಿ ಕೇವಲ ೪ ದಿನಗಳಾಯಿತಷ್ಟೆ ಇವತ್ತಿಗೆ. ಇದೇನು ಮೊದಲ ಸಲವಲ್ಲ ನಾನೊಬ್ಬನೇ ನೀನಿಲ್ಲದೆ ಇದ್ದಿದ್ದು. ಆದರೂ ಈ ಸಲ ಅದೇನೋ ಮನಸಿಗೆ ಅರಿವಾದಂತಿದೆ.. ನೀನಿಲ್ಲ ಬಳಿಯಲ್ಲಿ ಅನ್ನುವ ಅನಿಸಿಕೆ; ಎದೆಯೊಳಗೆ ಹೇಳಲಾಗದ ಚಡಪಡಿಕೆ. ನೀನು ನನಗೆ ಕೇಳಿದ ಹಲವು ಪ್ರಶ್ನೆಗಳಿಗೆ ಈ ಪರಿಯಲ್ಲಿ ಮರುತ್ತರ ನೀಡುತ್ತಿರಬಹುದೇ ನನ್ನಂತರಾಳ?

ನಾನು ಮೂಲತಃ ಮನದಾಳ ವ್ಯಕ್ತ ಪಡಿಸುವವನಲ್ಲ; ಅದು ನಿನಗೂ ಗೊತ್ತು ಅಲ್ಲವೇ? ಹಾಗೆಯೇ ಪ್ರೀತಿ ಪ್ರೇಮ ಭಾವನೆಗಳಿಗೆ ಸ್ಪಂದಿಸದ ಒರಟನೂ ಅಲ್ಲ ಅನ್ನುವುದು ಸಹ ನಿನಗೆ ಗೊತ್ತಿರದೇ? ಒಂಥರಾ ವಿವರಿಸಲಾಗದ ನಾಚಿಕೆ ಅಂದರೂ ತಪ್ಪಲ್ಲ. ನೀನು ಅದಕ್ಕೆ ತದ್ವುರುದ್ಧ. ಕ್ಷಣ ಕ್ಷಣಕೂ ಮನಸ್ಸನ್ನೇ ಬಿಚ್ಚಿ ಮಾತಾಡಬಲ್ಲವಳು.. ಜೀವನ ಪ್ರೀತಿಯನ್ನು ಮೈದೂಡಿಸಿಕೊಂಡವಳು. ನನ್ನಿಂದಲೂ ಅದೇ ರೀತಿಯ ಪ್ರತಿಕ್ರಿಯೆ ನೀನು ಬಯಸುವುದು ತಪ್ಪೇನೂ ಅಲ್ಲ. ಆದರೆ ಪ್ರೀತಿ ಒಲವಿನ ವಿಷಯ ಬಹಿರಂಗವಾಗಿ ಪದಗಳ ಮೂಲಕ ಹೇಳದಿದ್ದರೂ ನನ್ನ ಒಡನಾಟದಲ್ಲಿ ನಿನಗೆ ತೋರಿ ಬರಲಿಲ್ಲವೇ? ಎಲ್ಲವೂ ಬಾಯಿ ಬಿಟ್ಟು ಹೇಳುವ ಅವಶ್ಯಕತೆ ಇದೆಯೇ? ಅಷ್ಟಕ್ಕಾಗಿ ನನ್ನಲ್ಲಿ ಸಿಟ್ಟು ನೀನು ತೋರುವುದು ನ್ಯಾಯವೇ? ನೋಡು.. ಹೀಗಿದ್ದರೂ ಲೇಖನಿ ಹಿಡಿದು ನಿನಗಾಗಿ ಪದಗಳ ಜೋಡಣೆಗೆ ತೊಡಗಿದ್ದೇನೆ. ಸತಿಗಾಗಿ ಇಂದು ಕವಿಯಾಗ ಹೊರಟಿದ್ದೇನೆ ನಾನು..

ಇಷ್ಟೇ ಹೇಳಬಲ್ಲೆ ನನ್ನ ಒಲವಿನ ಹೂವಿಗೆ...

ನೀನಿಂದು ತುಂಬಾ ನೆನಪಾಗುತ್ತಿರುವೆ ನನ್ನವಳೇ
ನಿನ್ನ ಕಾಲ್ಗೆಜ್ಜೆಯ ದನಿ ಅತ್ತಿತ್ತ ಸುಳಿವಾಗ
ನಿನ್ನ ತುಟಿಯಂಚಿನ ನಗು ಕಣ್ಣಂಚಿನ ಹುಸಿಗೋಪ
ಹುಡುಕಾಡುತಿರುವೆ ಇಂದು ಹೋದಲ್ಲಿ ಬಂದಲ್ಲಿ
ನನ್ನೊಳಗಿನ ಪ್ರೇಮಕ್ಕೆ ನಿನಗೇಕೆ ಬೇಕು ಬೇರೆ ಕನ್ನಡಿ?
ಮೌನರಾಗದಲಿ ವಸಂತಗಾನ ಮೂಡಿರಲು ||

ನಿನ್ನ ಬರುವುಗಾಗೇ ಕಾಯುತ್ತಿರುವ,

ಇಂತಿ,
ನಿನ್ನವ.


-uShai.

Wednesday, March 17, 2010

ಮನ - ಮಾತು - ಮೌನ - ಜೀವನ

"ಮಾತು ಬೆಳ್ಳಿ ಮೌನ ಬಂಗಾರ" - ಅನ್ನುವುದು ಅಕ್ಷರಶಃ ನಿಜ. ಆದರೆ ಮಾತುಗಳ ಮಧ್ಯೆ ಮೌನ ...?

ಮಾತಿನ ವರಸೆ ತನ್ನ ವಲಯ ಮಿತಿಯ ಮೀರಿದರೆ ಸಂಪೂರ್ಣ ಬೇರೆಯ ಅರ್ಥದ ಕಲ್ಪನೆ ಕೊಡುತ್ತದೆ. ಆದರೆ ಕೆಲವು ಪರಿಸ್ಥಿತಿಯಲ್ಲಿ ಮೌನವಾಗಿರುವುದೇ ಮತ್ತಷ್ಟು ಅನರ್ಥ ಉಂಟುಮಾಡಬಹುದು. ತಾನು ಏನನ್ನು ಅರ್ಥೈಸಿಕೊಂಡೆ ಅನ್ನುವುದನ್ನು ಕೇಳುಗ ಬಿಡಿಸಿ ಹೇಳಿದರೆ ಮತ್ತೊಮ್ಮೆ ಮಾತಿನ ’ನಿಜ ಅರ್ಥ’ ಎನೆಂದು ವಿವರಿಸಿ ಹೇಳಲು ಸಾಧ್ಯವಷ್ಟೇ? ಏನೂ ಅನ್ನದೆ ಸುಮ್ಮನೆ ಮನದೊಳಗೆ ಸಿಟ್ಟಿನ ಕಡಲೆ ಜಗಿದರೆ...? ಇದಕ್ಕೇ ಇರಬೇಕು , ಮಾತು ಬಲ್ಲವಗೆ ಜಗಳವಿಲ್ಲ ಅಂತ ಹಿರಿಯರು ಅಂದಿದ್ದು.

ಮನಸ್ಸೆನ್ನುವುದು ಮರ್ಕಟ ಹೌದು. ಅದರೂ ಮಾತು-ಮೌನ ಮನಸ್ಸಿಗೇ ಕನ್ನಡಿ ಆದರೆ ಬಲು ಚೆಂದ. ಆಡುವ ಮಾತು ಮುತ್ತಿನಂತಿದ್ದು ಅಂತರಂಗದಲಿ ಮಾರಿ ಹಬ್ಬ ಹೋಳಿಯಾಟ ನಡೆದರೆ ಚೆನ್ನವೇ? ಆದ್ದರಿಂದ ತಪ್ಪಿರಲಿ ಏನೇ ಆಗಲಿ.. ಮನದೊಳಗೆ ಏನನ್ನಿಸುವುದೋ ಮಾತಲ್ಲೂ ಅದೇ ಬಂದರೆ ಎಷ್ಟೋ ಸಂಬಂಧಗಳ ನಡುವೆ ತಪ್ಪು ಕಲ್ಪನೆಗೆ ಅವಕಾಶವೇ ಇರದು. ಒಮ್ಮೆಗೆ ಕೇಳಲು ಅಪ್ರಿಯವೆನಿಸಿದರೂ ಸತ್ಯ,ವಿಶ್ವಾಸಗಳೇ ಸಂಬಂಧಗಳ ಶಾಶ್ವತ ಅಡಿಪಾಯವಾಗಲಿ ಎನ್ನುವುದೇ ನನ್ನ ಹಾರೈಕೆ.

ಹೊಸ ವರುಷ ಶುರು ಮಾಡುವ ಮುನ್ನ ಇದೊಂದು ಮೂಲಮಂತ್ರ ಜೀವನದಿ ಅಳವಡಿಸಿಕೊಳ್ಳುವಂತಾಗಲಿ ಎಲ್ಲರೂ....

ಸರ್ವೇ ಜನಾಃ ಸುಖಿನೋ ಭವಂತು ||

-