[ From Old Archive ]
ಅದೊಂದು ಸುಂದರವಾದ ಭಾನುವಾರದ ಮುಸ್ಸಂಜೆಯ ಹೊತ್ತು . ವಾರಾಂತ್ಯದ ರೂಢಿಯಂತೆ ಸಬ್ಜಿಮಂಡಿಯಿಂದ ದಿನಸಿ ಖರೀದಿ ಮುಗಿಸಿ ಮನೆಗೆ ವಾಪಾಸು ಬರುತ್ತಿದ್ದೆ. ಆಗಸದತ್ತ ನೋಡಿದರೆ ರಂಗು ರಂಗಿನ ರಂಗೋಲಿ ಬಣ್ಣದ ಓಕುಳಿಯಾಡಿದಂತಿತ್ತು . ಸುತ್ತಮುತ್ತಲ ಆ ವಾತಾವರಣ ನನ್ನಲ್ಲಿ ಹೊಸ ಸ್ಫೂರ್ತಿ ಮೂಡಿಸಿತು. ಮನದಾಳದಲ್ಲಿ ಯೋಚನೆಗಳ ಆಗರವೇ ತುಂಬಲಾರಂಭಿಸಿತು...
ದಿನದ ವಿವಿಧ ಹಂತ ಗತಿಗಳನ್ನು ಆಳವಾಗಿ ನೋಡಿದರೆ ಜೀವನದ ‘ಬಾಲ್ಯ’ವು ದಿನದ ‘ಮುಂಜಾನೆ’ಯಾದರೆ, ‘ಯೌವನ’ವನ್ನು ‘ಮಧ್ಯಾಹ್ನ’ವೆನ್ನಬಹುದು. ‘ಮುಪ್ಪು, ಮುದಿತನ’ವನ್ನು ಬಾಳಿನ ‘ಸಂಜೆ’ ಎನ್ನಬಹುದು ಅಲ್ವೇ?
ಇಲ್ಲಿ ಒಂದು ವಿಷಯ ಗಮನಿಸಿದಿರಾ ? ಮನುಷ್ಯನ ಬದುಕಿನಲ್ಲಿ ‘ಯೌವನ’ ವು ರಂಗು ರಂಗಿನ ಭಾಗವಾದರೆ, ದಿನದ ‘ಮಧ್ಯಾಹ್ನ’ ಬಿಸಿಲು ಧಗೆಯಿಂದ ಕೂಡಿರುವುದು! ಅದೇ ‘ಸಂಜೆ’ ವಿಧವಿಧದ ಬಣ್ಣ ಚೆಲ್ಲಿ, ತಂಪು ತಂಗಾಳಿಯನ್ನು ಬೀಸಿ ಮನಕ್ಕೆ ಮುದ ನೀಡುವುದು. ಎಂಥಾ ವೈಪರೀತ್ಯವಿದು?
ಬೆಳಕು - ಕತ್ತಲೆಗಳ ವಾಸ್ತವಿಕತೆಗಳ ನಡುವೆ ಬರುವ ಈ ತಂಪಿನ ಮುಸ್ಸಂಜೆ ಒಂದು ಭ್ರಮಾಲೋಕವಿದ್ದಂತೆ. ಹೀಗೆಯೇ ಅಲ್ಲವೇ ನಮ್ಮ ಜೀವನ ಕೂಡಾ? ಬದುಕಲ್ಲಿ ಹುಟ್ಟು-ಸಾವು, ಆದಿ-ಅಂತ್ಯಗಳು ವಾಸ್ತವ-ನಿಜವಾದರೂ, ಇವೆರಡರ ನಡುವೆ ಮನುಜನದು ಕನಸುಗಳ ನನಸು ಮಾಡುವತ್ತ ನಡೆದಾಟ, ಅಲೆದಾಟ... ಅದಕ್ಕಾಗಿಯೇ ಕೆಲವೊಮ್ಮೆ ಹೊಡೆದಾಟ...
‘ಸತ್ಯ ಮಿಥ್ಯಗಳ ನಡುವೆ ಸಿಲುಕಿಹುದು ದಿನ ಬದುಕು
ಕೈಗೆಟುಕದ ನಕ್ಷತ್ರಕೆ ಬೇಡಿಹುದು ಮನ ಸಹಜ
ನಕ್ಷತ್ರಿಕ ಬಿಡನಿವನು ಆಸೆಗಳ ಬೆಂಬತ್ತಿ
ಮಾಯಾ ಮರೀಚಿಕೆಗೆ ತಹತಹಿಸಿ ತೊಳಲಾಡೆ
ನಿನಗೆಲ್ಲಿ ನೆಮ್ಮದಿಯು ಹೇಳು ಮನುಜ?’
ಕಣ್ಣಿಗೆ ತೋರುವಂಥವು, ಅನುಭವಕ್ಕೆ ಬರುವಂಥವು ಮಾತ್ರ ನಿಜ, ಉಳಿದೆಲ್ಲವೂ ಸುಳ್ಳು ಅಂದರೆ ಅದೂ ಅರ್ಧ ಸತ್ಯ- ನಾಣ್ಯದ ಒಂದು ಮುಖವಿದ್ದಂತೆ. ಇನ್ನೊಂದು ಮುಖದ ಪರಿಚಯವಾಗುವುದು ಕಣ್ಣಿಗೆ ಕಾಣಲಾರದ ‘ಸತ್ಯ’ ವಿರಬಹುದೇ?
ಸ್ವಾಮಿ ಸಂತರು ಬುಧ್ಧಿಜೀವಿಗಳು ಕಂಡುಕೊಂಡ ಈ ಜ್ಞಾನಸತ್ಯದ ಬಗ್ಗೆ ಮಾತಾಡುವುದು ಖಂಡಿತಾ ಈ ಲೇಖನದ ಉದ್ದೇಶವಲ್ಲ . ಜೀವನದ ಔನ್ನತ್ಯದ ಆಳವನ್ನಿರಿಯಲು ವಾಸ್ತವಿಕತೆ - ಭ್ರಮೆ ಇವೆರಡರ ಅರಿವು ಬೇಕೇ ಬೇಕು ಎಂದು ವಿವರಿಸುವ ಪ್ರಯತ್ನವೇ ಈ ಅಕ್ಷರ ರೂಪ. ‘ಇರುವುದೆಲ್ಲವ ಬಿಟ್ಟು ಇರದುದರೆಡಗೆ ನಡೆವುದೆ ಜೀವನ ’ ಎಂಬ ಚಂಡೆಮದ್ದಳೆಯ ಕವಿ ಗೋಪಾಲಕೃಷ್ಣ ಅಡಿಗರ ‘ಮೋಹನಮುರಳಿ’ ಪದ್ಯದ ಸಾಲುಗಳು ಒಂದರ್ಥದಲ್ಲಿ ಇದೇ ವಿಷಯದ ಮರ್ಮವ ಸಾರುತ್ತವೆಂದು ನನ್ನನಿಸಿಕೆ.
ಸತ್ಯದ ಬೆಲೆಯನ್ನಿರಿಯಲು ಸುಳ್ಳು ಯಾವುದು ಎಂದು ತಿಳಿವುದು ಎಷ್ಟು ಮುಖ್ಯವೋ, ನ್ಯಾಯ - ಅನ್ಯಾಯ, ಬೆಳಕು - ಕತ್ತಲೆ, ವಾಸ್ತವ - ಭ್ರಮೆ ... ಇತ್ಯಾದಿಯೆಲ್ಲವೂ ಸರಿಸಮಾನತೆಯ ಎರಡು ಅವಿಭಾಜ್ಯ ಮುಖಗಳು ಅನ್ನೋದು ದಿಟವಲ್ವೇ?
ಕಾರು ಮನೆ ಮುಂದೆ ನಿಂತಾಗಲೇ ನನ್ನ ಯೋಚನಾಧಾರೆಗೆ ಕ್ಷಣಿಕ ಕಾಲದ ಕಡಿವಾಣ ಬಿದ್ದದ್ದು ! ಮತ್ತೆ ಭ್ರಮೆಯಿಂದ ವಾಸ್ತವಿಕತೆಯ ಕಡೆ ಪಯಣ... ಮರಳಿ ಕನಸುಗಳ ಗೂಡಿಗೆ..
No comments:
Post a Comment