Saturday, June 03, 2006


"ಆಮಿಶ್"


Amish ನಾ ಹುಟ್ಟಿ ಬೆಳೆದಿದ್ದು ಪುಟ್ಟ ಹಳ್ಳಿಯೊಂದರಲ್ಲಿ. ಹಳ್ಳಿ ಎಂದ ಮೇಲೆ ಬೇಸಗೆಯಲ್ಲಿ ದಿನಕ್ಕೆ ಇಂತಿಷ್ಟು ನಿರ್ದಿಷ್ಟ ಕಾಲ ಪವರ್ ಕಟ್ ಇರುವುದು ಬಲು ಸಾಮಾನ್ಯದ ವಿಷಯ. ತಿಂಗಳ ಮೊದಲ ೧೫ ದಿವಸ ಬೆಳಗ್ಗೆ ೬ ಘಂಟೆ ಕಟ್ ಇದ್ದರೆ, ಉಳಿದ ೧೫ ದಿವಸ ಮಧ್ಯಾಹ್ನ ಮೇಲೆ. ಆವಾಗ ಅದಕ್ಕನುಗುಣವಾಗಿ ನಮ್ಮ ದಿನಚರಿಯೂ ಬದಲಾಗುತ್ತಿತ್ತು! ಬೆಳಗ್ಗೆ ೬ ಘಂಟೆಗೆ ಕರೆಂಟು ಹೋಗುವುದೆಂದು ಚುಮು ಚುಮು ಬೆಳಗಾದೊಡನೆ ಎದ್ದು ನೀರು ತುಂಬಿಸಿಡುವುದು ಅಪ್ಪನ ಕೆಲಸವಾದರೆ, ದೋಸೆ ಹಿಟ್ಟು ಅಥವಾ ಅಡುಗೆಗೆ ಬೇಕಾದ ಸಾಂಬಾರ್ ಕಡೆಡಿದುವುದು ಅಮ್ಮನ ಪಾಳಿ.ವಿದ್ಯುತ್-ಚಾಲಿತ ಯಂತ್ರಗಳಿಗೆ ಇಷ್ಟರ ಮಟ್ಟಿಗೆ ಅವಲಂಬಿಯಾಗಿದ್ದೇವೆ ನಾವು ಮಾನವರು ಅಲ್ವೇ?. ಇದರ ಮಧ್ಯದಲ್ಲಿ ಟೀವಿಯಲ್ಲಿ ಕ್ರಿಕೆಟ್ ಮ್ಯಾಚ್ ಇದ್ದರಂತೂ ವಿದ್ಯುತ್ ಪಾಲಿಕೆಗೆ ಹಲವು ಹಿಡಿಶಾಪಗಳ ಕಂತೆ ಬೇರೆ! ಅಂತೂ ೬ ಘಂಟೆಗಳ ಕರೆಂಟ್-ರಹಿತ ಕಾಲ ಕಳೆವುದೆಂದರೆ ಹೇಳಬಾರದಷ್ಟು ಕಷ್ಟಕರವೆನಿಸಿತ್ತು.

ಇಂತದ್ರಲ್ಲಿ ವಿದ್ಯುತ್,ಟಿವಿ,ಕಾರು ... ತಮ್ಮ ಕೈಗೆಟುಕುವಂತಿದ್ದರೂ ಅವನ್ನು ಜೀವನವಿಡೀ ಉಪಯೋಗಿಸದೇ ಇರುವ ಜನರೂ ಅಮೆರಿಕ,ಕೆನಡಾದಂಥಹ ಮುಂದುವರಿದ ದೇಶಗಳಲ್ಲಿ ಇದ್ದಾರೆ ಅಂದ್ರೆ ಮಹದಾಶ್ಚರ್ಯವೆನಿಸಬಹುದಲ್ವೇ?

ಹೌದು, "ಆಮಿಶ್(Amish)" ಅನ್ನುವ ಧಾರ್ಮಿಕ ಪಂಗಡದ ಜನರು ಇನ್ನೂ ೧೮ನೇ ಶತಮಾನದಂಚಿನ ಕಾಲದಿಂದ ಹೊರಗೆ ಬಂದಿಲ್ಲ. "ಸಹಜೀವನವೇ ಮಾನವ ಧರ್ಮ" ಎನ್ನುವುದನ್ನು ಅಕ್ಷರಶಃ ಪಾಲಿಸಿಕೊಂಡು ಬರುತ್ತಿರುವ ಈ ಜನಾಂಗ ಮಾಯಾ ಜಗತ್ತಿನ ಥಳಕಿನಿಂದ ಸಾವಿರಾರು ಯೋಜನ ದೂರವಿದ್ದಾರೆ.

ಆಮಿಶ್ ಸಂಸ್ಕೃತಿಯಲ್ಲಿ ಮುಖ್ಯವಾಗಿ ಗಮನಕ್ಕೆ ಬರುವ ಸಂಗತಿಯೆಂದರೆ ಒಗ್ಗಟ್ಟಿನ ಸಾಂಸಾರಿಕ ಜೀವನ. ಏಳರಿಂದ ಹತ್ತು ಮಕ್ಕಳಿರುವ ದೊಡ್ಡ ಕುಟುಂಬಗಳು ಸರ್ವೇ ಸಾಮಾನ್ಯ.ಗಂಡಸರು ಹೊಲ-ಗದ್ದೆಗಳ ಕೆಲಸ ನಿರ್ವಹಿಸಿದರೆ, ಹೆಂಗಸರು ಅಡುಗೆ,ಬಟ್ಟೆ ತೊಳೆಯುವುದು ಇತ್ಯಾದಿ ಮನೆಗೆಲಸಗಳನ್ನು ಮಾಡುತ್ತಾರೆ. ಜರ್ಮನ್ ಭಾಷೆ ಆಡುಭಾಷೆ ಆಗಿದ್ದರೂ ಶಾಲೆಗಳಲ್ಲಿ ಇಂಗ್ಲಿಷ್ ಭಾಷೆಯನ್ನೂ ಕಲಿಸಲಾಗುತ್ತದೆ.ಆಮಿಶ್ ಮಕ್ಕಳು ಕಲಿಯುವುದು ಹೆಚ್ಚೆಂದರೆ ೮ನೇ ತರಗತಿಯವರೆಗೆ; ಅದೂ ತಮ್ಮದೇ ಆದ ಪ್ರೈವೇಟ್ ಶಾಲೆಗಳಲ್ಲಿ ಮಾತ್ರ.

Amish"ಅನಬಾಪ್ಟಿಸ್ಟ್"ಗಳ ಅನುಯಾಯಿಗಳಾದ ಇವರ ಒಂದು ಗುಂಪು ಸುಮಾರು ಹದಿನಾರನೇ ಶತಮಾನದ ಕೊನೆಗೆ ಅಮೆರಿಕಾದ ಪೆನ್ಸಿಲ್ವೇನಿಯಾಕ್ಕೆ ಬಂದು ನೆಲೆಸಿತು. ಒಟ್ಟಾಗಿ ೨೪ ರಾಜ್ಯಗಳು, ಕೆನಡಾ ಹಾಗೂ ಮಧ್ಯ ಅಮೆರಿಕಾಗಳಲ್ಲಿ ಹರಡಿಕೊಂಡಿರುವ ಜರ್ಮನ್ ಮೂಲದ ಇವರ ಉಡುಗೆ-ತೊಡುಗೆಗಳಲ್ಲಿ ನಿರಾಡಂಬರತೆ ಎದ್ದು ಕಾಣುವುದು.ಇವರು ತಾವೇ ಮನೆಗಳಲ್ಲಿ ತಯಾರಿಸಿದ ಬಟ್ಟೆ ಉಡುತ್ತಾರೆ(ಹೆಚ್ಚಾಗಿ ನೀಲಿ,ಕಪ್ಪು,ಕಂದು ಅಥವಾ ನೇರಳೆ ಬಣ್ಣದವು). ಆಧುನಿಕ ತಂತ್ರಜ್ಞಾನ ತಮ್ಮ ಬಲಯುತವಾದ ಕುಟುಂಬದ ಅಯಕಟ್ಟನ್ನು ಸಡಿಲಗೊಳಿಸುವುದೆಂದು ಅವರ ನಂಬಿಕೆ. ಹೆಚ್ಚಾಗಿ ಹೊಲ ಕೆಲಸಗಳಿಗೆ ಕುದುರೆ ಚಾಲಿತ ಯಂತ್ರೋಪಕರಣಗಳು, ಓಡಾಡಲು ಕುದುರೆ ಗಾಡಿ ಬಳಕೆಯಲ್ಲಿವೆ. ತಮ್ಮ ಮನೆಗಳಲ್ಲಿ ಟೆಲೆಫೋನ್ ಸೌಲಭ್ಯ ತೆಗೆದುಕೊಳ್ಳದಿದ್ದರೂ ಹಲವು ಕುಟುಂಬಗಳು ಒಟ್ಟು ಸೇರಿ ಒಂದು ಕಡೆ ಪುಟ್ಟ ಮರದ ಜೋಪಡಿಯೊಂದರಲ್ಲಿ ಬೂತ್ ಇಟ್ಟುಕೊಂಡಿರುತ್ತಾರೆ.

ಆಮಿಶ್ ಜನರು ತಮ್ಮದೇ ಪಂಗಡದೊಳಗೆ ಮಾತ್ರ ಮದುವೆ ಮಾಡಿಕೊಳ್ಳುತ್ತಾರೆ. ಅಂತರ್ಜಾತೀಯ ವಿವಾಹ ಅಥವಾ ಡೈವೋರ್ಸ್‌ಗಳಿಗೆ ಅವಕಾಶವೇ ಇಲ್ಲ!.


- uShai