Thursday, January 12, 2006

ಬಾಲ್ಯದ ಒಂದು ನೆನಪ ತುಣುಕು

ನನಗೆ ಚಿಕ್ಕಂದಿನಿಂದಲೂ ಕಾಮಿಕ್ಸ್ ಕಥೆಗಳನ್ನು ಓದುವುದೆಂದರೆ ಪಂಚಪ್ರಾಣ. ಊಟ-ನಿದ್ರೆ ಬಿಟ್ಟಾದರೂ ಓದುವಷ್ಟು ಹುಚ್ಚು. ಫಾಂಟಮ್ (ನಡೆದಾಡುವ ಭೂತಪ್ಪ), ಇಂದ್ರಜಾಲ ಮಾಂಡ್ರೇಕ್ ನ ಕಥೆಗಳಂತೂ ನನ್ನನ್ನು ಹೊಸ ರೋಮಾಂಚಕ ಜಗತ್ತಿಗೆ ಒಯ್ದಂತೆ ಅನಿಸುತ್ತಿತ್ತು. ಪ್ರತಿ ಸಲ ಅಪ್ಪ ಪೇಟೆಗೆ ಹೊರಡುವಾಗಲೂ ಚಾಕಲೇಟು ತರದಿದ್ದರೂ ಪರವಾಗಿಲ್ಲ; ಕಾಮಿಕ್ಸ್ ಕಥೆ ಪುಸ್ತಕ ತರಲು ನೆನಪಿಸುತ್ತಿದ್ದೆ.ದಿನ ಕಳೆದಂತೆ ನನ್ನ ಓದಿನ ಅಭಿರುಚಿಯ ಪಟ್ಟಿಗೆ ಪುರಾಣ ಕಥೆಗಳು, ಪಂಚತಂತ್ರ, ಬೀರಬಲ್ಲನ ಕಥೆಗಳು ಹೀಗೆ ಹಲವಾರು ಸೇರಿಕೊಂಡವು. ಪೌರಾಣಿಕ ಕಥೆಗಳಲ್ಲಿ ನನಗೆ ಬಲು ಇಷ್ಟವೆನಿಸಿದ್ದು ಮಹಾಭಾರತ. ನ್ಯಾಯ-ನೀತಿ ಧರ್ಮಗಳೇ ಧಾರೆ ಎರೆದಂತಿರುವ ರಾಮಾಯಣ ಪ್ರಿಯವೆನಿಸಿದರೂ, ನವರಸಭರಿತ ಮಹಾಭಾರತದ ಕಥೆ-ಉಪ ಕಥೆಗಳು ಬಲು ಸ್ವಾರಸ್ಯಕರವೆನಿಸಿದವು.

ಮಹಾಭಾರತ - ಪುರಾತನ ಮಹಾಗ್ರಂಥಗಳಲ್ಲೊಂದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇದರ ಅಗ್ಗಳಿಕೆ ಬಗ್ಗೆ ನಾನು ಹೆಚ್ಚೇನೂ ಉಲ್ಲೇಖಿಸುವ ಅವಶ್ಯಕತೆಯಿಲ್ಲ. ತಮ್ಮದೇ ಆದ ಶೈಲಿಯಲ್ಲಿ ವೇದವ್ಯಾಸರ ಮೂಲಕಥೆಯ ಹಂದರದ ಸುತ್ತ ಕುಮಾರವ್ಯಾಸ,ರನ್ನ,ಪಂಪ ಹೀಗೆ ಹತ್ತಾರು ಕವಿಗಳು ಉಪಕಥೆಗಳ ಬಳ್ಳಿಗಳನ್ನು ಹಬ್ಬಿಸಿದ್ದಾರೆ;ತಮಗಿಷ್ಟವಾದ ಪಾತ್ರಗಳಿಗೆ ಹೊಸ ರೂಪದ ಜೀವವನ್ನು ತುಂಬಿದ್ದಾರೆ. ಕುಮಾರವ್ಯಾಸನ ಕಥಾಮಂಜರಿ, ರನ್ನನ ಗದಾಯುದ್ಧ - ಇವುಗಳ ಬಗ್ಗೆ ಬರೆಯುವಷ್ಟು ಅಥವಾ ವಿಮರ್ಶಿಸುವಷ್ಟು ನಾನು ಅನುಭವಿಯಲ್ಲ. ಆದರೂ 'ಭಾರತ ಕಥಾಮಂಜರಿ' ಹಾಗೂ 'ಗದಾಯುದ್ಧ'ಗಳಲ್ಲಿ ನನಗೆ ಕಂಡ ಸಾಮ್ಯತೆಯೆಂದರೆ 'ಸುಯೋಧನನ ಪಾತ್ರ'. ಓದುತ್ತಿದ್ದಂತೆ ಆ ಪಾತ್ರದ ಒಳ್ಳೆಯ ಗುಣಗಳು ತಲೆಯೆತ್ತಿ ತೋರಿದಂತೆ ಭಾಸವಾಗುತ್ತವೆ. ಪರಿಸ್ಥಿತಿಯೇ ಪ್ರಚೋದಕ ರೂಪದಲ್ಲಿ ಸುಯೋಧನನನ್ನು ದುರ್ಯೋಧನನಾಗಿ ವರ್ತಿಸುವಂತೆ ಕಾರಣವಾಯಿತೆಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ವಿಷಯದ ಬಗ್ಗೆ ಮತ್ತೊಮ್ಮೆ ಬರೆಯುವೆ ಇನ್ನೊಂದು ಅಂಕಣದಲ್ಲಿ...

ನನ್ನ ತಂದೆಯ ಆತ್ಮೀಯ ಗೆಳೆಯರೊಬ್ಬರು ಮನೆಗೆ ಬಂದಾಗಲೆಲ್ಲ ತರ್ಕಬದ್ಧ ರೀತಿಯಲ್ಲಿ ಕೆಲವು ಪೌರಾಣಿಕ ಕಥಾ ಪ್ರಸಂಗಗಳ ಬಗ್ಗೆ ಚರ್ಚೆ ಮಾಡುವುದನ್ನು ಸುಮ್ಮನೆ ಗುಂಪಿನಲ್ಲಿ ಕೂತು ಆಲಿಸುತ್ತಿದ್ದೆ. ಯಾವುದೇ ಪೌರಾಣಿಕ ವಿಷಯವಿರಲಿ, ಅದನ್ನು ಕೂಲಂಕುಷವಾಗಿ ಚರ್ಚಿಸಿ ಹಲವು ದೃಷ್ಟಿಕೋನಗಳನ್ನು ಕೇಳುಗರಿಗೆ ತೋರಿಸಿಕೊಡುವ ಸಾಮರ್ಥ್ಯ ಅವರಲ್ಲಿತ್ತು. ಹೆಚ್ಚಿನ ಸಲ ಅವರ ವಾದ-ಪ್ರತಿವಾದಗಳಿಗೆ ಆಧಾರ ರನ್ನನ ಮಹಾಭಾರತ ಇಲ್ಲವೇ ಕುಮಾರವ್ಯಾಸನ ಕಥಾಮಂಜರಿ ಆಗಿರುತ್ತಿದ್ದವು. ನಾ ಕೇಳಿದ ಕಥೆಗಳಲ್ಲಿ ಒಂದು ಪ್ರಸಂಗ ಇನ್ನೂ ಹಸಿಯಾಗಿ ನೆನಪಿದೆ.... (ಇನ್ನೂ ಇದೆ)


- uShai
Is Story Mein Emotion Hai, Drama Hai, Tragedy Hai

ಸಿನೆಮಾ ಜಗತ್ತಿನ ಆಗುಹೋಗುಗಳ ಬಗ್ಗೆ ನನ್ನಂತೆ ನಿಮಗೂ ಆಸಕ್ತಿ ಇದ್ದಲ್ಲಿ ಈ ವಿಷಯ ನೀವೂ ಗಮನಿಸಿರಬಹುದು. ಯಾವುದೇ ಸಿನೆಮಾ ಬಿಡುಗಡೆ ಆಗುವ ಮೊದಲು ಯಾ ಆದ ಕೂಡಲೇ ಬರುವ ಸಂದರ್ಶನಗಳಲ್ಲಿ ಪತ್ರಕರ್ತರು ನಾಯಕ-ನಾಯಕಿ,ನಿರ್ದೇಶಕ-ನಿರ್ಮಾಪಕರಿಗೆ ಹಾಕುವ ಸಾಮಾನ್ಯ ಸವಾಲು 'ಈ ಸಿನೆಮಾ ಬಗ್ಗೆ ನಿಮ್ಮ ಅಭಿಪ್ರಾಯವೇನು?..' ಅಥವಾ 'ನಿಮ್ಮ ಪಾತ್ರದ ಬಗ್ಗೆ ಹೇಳ್ತೀರಾ?'. ಉದಯ್ನೋನ್ಮುಖ ಕಲಾವಿದನಿರಲಿ ಅಥವಾ ಈಗಾಗಲೇ ಹತ್ತಾರು-ನೂರಾರು ಸಿನೆಮಾಗಳಲ್ಲಿ ನಟಿಸಿರಲಿ, ಏನೂ ಹೆಚ್ಚಿನ ಅಂತರವಿಲ್ಲ ಬಿಡಿ, ಕೊಡುವ ಉತ್ತರ ಒಂದೇ-'ಈ ಚಿತ್ರದಲ್ಲಿ ನನಗೆ ತುಂಬಾ ಭಿನ್ನವಾದ ಪಾತ್ರವಿದೆ....ಹೊಸ ಬಗೆಯ ಕಥೆಯಿದೆ...'ಇತ್ಯಾದಿ ಇತ್ಯಾದಿ. ಅರ್ಥಾತ್ ದಿನನಿತ್ಯ ಬರುವ ದೂರದರ್ಶನದ ಹವಾಮಾನ ವರದಿಗೂ (ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ?!) ಇವರು ಕೊಡುವ ಉತ್ತರಕ್ಕೂ ಬಲು ಹತ್ತಿರದ ಸಾಮ್ಯತೆಯಿದೆ ಎನ್ನಬಹುದು- ಅದೇ ರಾಗ ಅದೇ ಹಾಡು. ಪ್ರಶ್ನೆಗೆ ಮತ್ತದೇ ಉತ್ತರ ಹಲವು ಬಗೆಯಲ್ಲಿ ನಾಯಕ-ನಾಯಕಿಯರು ತಂತಮ್ಮ ಶೈಲಿಯಲ್ಲಿ ವಿವರಿಸಿದರೂ, ಶ್ರೀ ಸಾಮಾನ್ಯ ರೀತಿಯಲ್ಲಿ ಒಂದೇ ವಾಕ್ಯದಲ್ಲಿ ಹೀಗೆ ಹೇಳಬಹುದಲ್ವಾ ? -'ಇಸ್ ಸ್ಟೋರಿ ಮೆ ಇಮೋಶನ್ ಹೆ, ಡ್ರಾಮಾ ಹೆ, ಟ್ರಾಜೆಡಿ ಹೆ'! ನೀವೇನಂತೀರಾ?


- uShai
Whats there in this Blog?

Destination for Kannada Lovers - "Sweet Home for Kannada Poems, Articles, Thoughtful Quotes"

uShai