Wednesday, January 06, 2010

ನೆನಪುಗಳ ನಂಟು

ಬಾಳಿನಲ್ಲಿ ಎಷ್ಟೋ ಬಗೆಯ ಸಂಬಂಧಗಳು ಹೀಗೇ ಬಂದು ಕೂಡುತ್ತವೆ, ಇನ್ನು ಕೆಲವು ತನ್ನಂತಾನಾಗಿಯೇ ಕಳಚಿ ಕೊಳ್ಳುತ್ತವೆ.ಕೆಲವು ಸಂಬಂಧಗಳು ಬೇಡವೆನ್ನಿಸಿದರೂ ಬಿಡಿಸಲಾಗದ ಗಂಟಾಗಿ ಉಳಿದು ಕೊಳ್ಳುತ್ತವೆ! ಪ್ರೀತಿಯ ನಂಟು ಇರದ ಸಂಬಂಧಕೆ ಅರ್ಥವಿದೆಯೇ? ಅಂಥವುಗಳ ಆಯುಷ್ಯವೂ ಬಲು ಕಡಿಮೆ. ಸಂಬಂಧವೆಂದರೆ ಒಡಹುಟ್ಟಿದವರೇ ಆಗಬೇಕಿಲ್ಲ. ಯಾರೋ ದಾರಿ ಮೇಲಿನ ಅಪರಿಚಿತ ಒಡನಾಡಿ, ಒಲವಿನ ಗೆಳೆಯರಾಗಬಹುದು.

ಸಂಬಂಧಗಳಿಗೆ ಹೆಸರಿರುವುದಿಲ್ಲ. ಹೆಸರಿಟ್ಟ ಸಂಬಂಧಗಳು ಅರ್ಥ ಕಳೆದು ಕೊಂಡರೆ ಅವಕ್ಕೆ ಯಾವ ಬೆಲೆಯೂ ಇಲ್ಲ. ಆದರೆ ಕೊಂಡಿ ಕಳಚಿ ಹೋದರೂ ಸಾವಿರ ನೆನಪುಗಳು ಕೆಲವೊಮ್ಮೆ ಮನದಲ್ಲಿ ಮುಜುಗರ ತೋರದೆಯೇ ಉಳಿದು ಬಿಡುತ್ತವೆ. ಸಿಹಿ ಒಂದೇ ಇರಲಿ ಒಡನೆ ಅಂಟಿಕೊಂಡಿರುವ ಕಹಿ ಬೇಡವೇ ಬೇಡ ಎನ್ನಲು ಸಾಧ್ಯವೇ? ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಅಂತ ಆಗಾಗ ಕಣ್ಮುಂದೆ ಬಂದು ಅಣಕಿಸುತ್ತವೆ ಈ ನೆನಪುಗಳು. ಕಾಡುವ ಈ ನೆನಪುಗಳಿಗೆ ಅದೆಷ್ಟು ಸಲ ಚಂದಾ ಬಾಕಿ ನೀಡಲು ಸಾಧ್ಯ?

-

No comments: