Tuesday, March 23, 2010

ಹೀಗೊಂದು ಪ್ರೇಮ ಪತ್ರ!

ನನ್ನವಳಿಗೆ,

ನೀನು ಹೋಗಿ ಕೇವಲ ೪ ದಿನಗಳಾಯಿತಷ್ಟೆ ಇವತ್ತಿಗೆ. ಇದೇನು ಮೊದಲ ಸಲವಲ್ಲ ನಾನೊಬ್ಬನೇ ನೀನಿಲ್ಲದೆ ಇದ್ದಿದ್ದು. ಆದರೂ ಈ ಸಲ ಅದೇನೋ ಮನಸಿಗೆ ಅರಿವಾದಂತಿದೆ.. ನೀನಿಲ್ಲ ಬಳಿಯಲ್ಲಿ ಅನ್ನುವ ಅನಿಸಿಕೆ; ಎದೆಯೊಳಗೆ ಹೇಳಲಾಗದ ಚಡಪಡಿಕೆ. ನೀನು ನನಗೆ ಕೇಳಿದ ಹಲವು ಪ್ರಶ್ನೆಗಳಿಗೆ ಈ ಪರಿಯಲ್ಲಿ ಮರುತ್ತರ ನೀಡುತ್ತಿರಬಹುದೇ ನನ್ನಂತರಾಳ?

ನಾನು ಮೂಲತಃ ಮನದಾಳ ವ್ಯಕ್ತ ಪಡಿಸುವವನಲ್ಲ; ಅದು ನಿನಗೂ ಗೊತ್ತು ಅಲ್ಲವೇ? ಹಾಗೆಯೇ ಪ್ರೀತಿ ಪ್ರೇಮ ಭಾವನೆಗಳಿಗೆ ಸ್ಪಂದಿಸದ ಒರಟನೂ ಅಲ್ಲ ಅನ್ನುವುದು ಸಹ ನಿನಗೆ ಗೊತ್ತಿರದೇ? ಒಂಥರಾ ವಿವರಿಸಲಾಗದ ನಾಚಿಕೆ ಅಂದರೂ ತಪ್ಪಲ್ಲ. ನೀನು ಅದಕ್ಕೆ ತದ್ವುರುದ್ಧ. ಕ್ಷಣ ಕ್ಷಣಕೂ ಮನಸ್ಸನ್ನೇ ಬಿಚ್ಚಿ ಮಾತಾಡಬಲ್ಲವಳು.. ಜೀವನ ಪ್ರೀತಿಯನ್ನು ಮೈದೂಡಿಸಿಕೊಂಡವಳು. ನನ್ನಿಂದಲೂ ಅದೇ ರೀತಿಯ ಪ್ರತಿಕ್ರಿಯೆ ನೀನು ಬಯಸುವುದು ತಪ್ಪೇನೂ ಅಲ್ಲ. ಆದರೆ ಪ್ರೀತಿ ಒಲವಿನ ವಿಷಯ ಬಹಿರಂಗವಾಗಿ ಪದಗಳ ಮೂಲಕ ಹೇಳದಿದ್ದರೂ ನನ್ನ ಒಡನಾಟದಲ್ಲಿ ನಿನಗೆ ತೋರಿ ಬರಲಿಲ್ಲವೇ? ಎಲ್ಲವೂ ಬಾಯಿ ಬಿಟ್ಟು ಹೇಳುವ ಅವಶ್ಯಕತೆ ಇದೆಯೇ? ಅಷ್ಟಕ್ಕಾಗಿ ನನ್ನಲ್ಲಿ ಸಿಟ್ಟು ನೀನು ತೋರುವುದು ನ್ಯಾಯವೇ? ನೋಡು.. ಹೀಗಿದ್ದರೂ ಲೇಖನಿ ಹಿಡಿದು ನಿನಗಾಗಿ ಪದಗಳ ಜೋಡಣೆಗೆ ತೊಡಗಿದ್ದೇನೆ. ಸತಿಗಾಗಿ ಇಂದು ಕವಿಯಾಗ ಹೊರಟಿದ್ದೇನೆ ನಾನು..

ಇಷ್ಟೇ ಹೇಳಬಲ್ಲೆ ನನ್ನ ಒಲವಿನ ಹೂವಿಗೆ...

ನೀನಿಂದು ತುಂಬಾ ನೆನಪಾಗುತ್ತಿರುವೆ ನನ್ನವಳೇ
ನಿನ್ನ ಕಾಲ್ಗೆಜ್ಜೆಯ ದನಿ ಅತ್ತಿತ್ತ ಸುಳಿವಾಗ
ನಿನ್ನ ತುಟಿಯಂಚಿನ ನಗು ಕಣ್ಣಂಚಿನ ಹುಸಿಗೋಪ
ಹುಡುಕಾಡುತಿರುವೆ ಇಂದು ಹೋದಲ್ಲಿ ಬಂದಲ್ಲಿ
ನನ್ನೊಳಗಿನ ಪ್ರೇಮಕ್ಕೆ ನಿನಗೇಕೆ ಬೇಕು ಬೇರೆ ಕನ್ನಡಿ?
ಮೌನರಾಗದಲಿ ವಸಂತಗಾನ ಮೂಡಿರಲು ||

ನಿನ್ನ ಬರುವುಗಾಗೇ ಕಾಯುತ್ತಿರುವ,

ಇಂತಿ,
ನಿನ್ನವ.


-uShai.

4 comments:

ಸೀತಾರಾಮ. ಕೆ. / SITARAM.K said...

nice narration

ಉಷೈ said...

ಸೀತಾರಾಮ್ ಅವರೇ,

ತುಂಬಾ ಧನ್ಯವಾದಗಳು ಬ್ಲಾಗಿಗೆ ಭೇಟಿ ಕೊಟ್ಟು ತಮ್ಮ ಪ್ರತಿಕ್ರಿಯೆ ನೀಡಿದ್ದಕ್ಕೆ..

- ಉಷೈ

ಜಲನಯನ said...

ಅವನ ಮನಸನ್ನು ಅವಳು ಅರಿತು ಅವನಂತೆ ಬರೆಯೋದು ಅಥವಾ ಅವನು ಅವಳ ಮನಸ್ಸನ್ನು ಬಿಂಬಿಸೋದು ಕಷ್ಟ...ಚನ್ನಾಗಿದೆ ಪ್ರಯತ್ನ....

ಉಷೈ said...

Jalanayana,

Thank you very much for your feedback. Please keep visiting my blog...

-uShai.