[ From Old Archive ]
ಗೊರನೂರಿನ ತಿಮ್ಮರಾಯರು ಊರಿಗೇ ದೊಡ್ಡ ಆಗರ್ಭ ಶ್ರೀಮಂತರು. ಹೇಳಿಕೊಳ್ಳುವ ಹಾಗೆ ಏನೂ ಕಷ್ಟ ಅವರಿಗೆ ಜೀವನದಲ್ಲಿ ಇರಲಿಲ್ಲ.. ಅರಮನೆಯಂತ ಮನೆ, ಮಾತಿಗೆ ತಗ್ಗಿಬಗ್ಗಿ ನಡೆಯೋ ಮಕ್ಕಳು ಸಂಸಾರ... ಇನ್ನೇನು ಬೇಕು? ಆದರೂ ಅವರಿಗೆ ಎರಡು ಆಸೆಗಳು ಯಾವತ್ತೂ ಮನದಲ್ಲೇ ಕೊರೆಯುತ್ತಾ ಇದ್ದವು... ಒಂದು ತಮ್ಮ ಜೀವನದಲ್ಲಿ ಒಮ್ಮೆಯಾದ್ರೂ ಏನಾದ್ರು ಬರೆದು, ಬರಹಗಾರ ಅಂತ ಹೇಳಿಸಿ ಕೊಳ್ಳಬೇಕೂಂತ. ಮತ್ತೆ ಇನ್ನೊಂದು ಎಲ್ಲರೂ ಭಾರಿ ಹೊಗಳುವ (ಮುಖ್ಯವಾಗಿ ಪಕ್ಕದ ಮನೆಯ ಶಾಂತಮ್ಮನ ಮಗಳು ಸೀತ ಅಮೆರಿಕದಿಂದ ಬಂದಾಗಲೆಲ್ಲ ಹೇಳುವ ಕತೆ ಕೇಳಿ!!) ಅಮೆರಿಕಾಕ್ಕೆ ಒಮ್ಮೆ ಭೇಟಿ ಕೊಡ್ಬೇಕೂಂತ.. .. ಪಾಪ ಯಾವುದಕ್ಕೂ ಸಮಯವೇ ಕೂಡಿ ಬರ್ಲಿಲ್ವೋ ಅಥವಾ ಏನು ಬರೆಯಬಹುದೂಂತ ಆಲೋಚಿಸುವುದರಲ್ಲೆ ಆಯುಷ್ಯ ಮುಗುದು ಹೋಯ್ತೋ ಗೊತ್ತಿಲ್ಲ.. ಅಂತೂ ಅವರ ಆಸೆ ನೆರವೇರಲೇ ಇಲ್ಲ.. ಪ್ರಕೃತಿ ನಿಯಮದಂತೆ ಅವರಿಗೂ ಒಂದು ದಿನ ಯಮನ ಕರೆ ಬಂದೇ ಬಿಟ್ಟಿತು...
ಪರಲೋಕದತ್ತ ಯಮದೂತರೊಂದಿಗೆ ಪಯಣ ಬೆಳೆಸುತ್ತಿರುವಾಗ ಅವರ ಮನದಲ್ಲಿ ಪುನಾ ಪೂರ್ಣವಾಗದ ಆಸೆಗಳು ತಲೆಯೆತ್ತತೊಡಗಿದವು.. ಯಮಪುರಿಗೆ ತಲುಪಿದ ಕೂಡಲೆ ಯಥಾಪ್ರಕಾರ ‘ಗುರುತು ಚೀಟಿ (Identity Card)’ ಎಲ್ಲ ಮಾಡಲಾಯಿತು ತಿಮ್ಮರಾಯರಿಗೆ! ಇದೆಲ್ಲಾ ನೋಡಿ ಪರ್ವಾಗಿಲ್ಲ , ಯಮಧರ್ಮರಾಯ ಕೂಡ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾನಲ್ಲಾ ಅನ್ನಿಸ್ತು ಅವ್ರಿಗೆ.
ತಿಮ್ಮರಾಯರ ಜೀವನ ಚರಿತ್ರೆ(Credit History!!) ನೋಡಿ ಯಮಧರ್ಮನಿಗೆ ಅವರ ಮೇಲೆ ಭಾರಿ ಒಳ್ಳೆಯ ಅಭಿಪ್ರಾಯ ಮೂಡಿಬಿಟ್ಟಿತು. ಅವರ ಪರಿಪೂರ್ಣವಾಗದ ಆಸೆ ನೆರವೇರಿಸಿಯೇ ಬಿಡುವಾಂತ ಗ್ರಹಿಸಿ ತಿಮ್ಮರಾಯರಿಗೆ ‘ಎಲೋ ತಿಮ್ಮರಾಯ, ನಿನ್ನ ಒಳ್ಳೆಯತನದ ಜೀವನಕ್ಕೆ ಮೆಚ್ಚಿ ಕೆಲ ದಿನಗಳ ಕಾಲ ಅಮೆರಿಕಕ್ಕೆ ಭೇಟಿ ನೀಡಲು ಒಪ್ಪಿಗೆ ನೀಡುತ್ತಿದ್ದೇನೆ... ಈ ದಿನಗಳಲ್ಲಿ ನಿನಗಾದ ಅನುಭವವನ್ನು ವರದಿಯ ರೂಪದಲ್ಲಿ ಬಂದೊಪ್ಪಿಸು... ಈ ಮೂಲಕ ನಿನ್ನೆರಡೂ ಆಸೆಗಳು ನೆರವೇರಿದಂತಾಗುತ್ತದೆ’ ಅಂತ ಹೇಳಿ 4 ದಿನ ಅಮೆರಿಕಾ ತಿರುಗಾಟಕ್ಕೆ ಪರ್ಮಿಶನ್ ಗ್ರಾಂಟ್ ಮಾಡೇ ಬಿಟ್ಟ , ಅಲ್ಲದೆ ಹೋಗಲು ಬೇಕಾದ ವ್ಯವಸ್ಠೆ ಕೂಡ...
ವೀಸಾ ಸ್ಟಾಂಪಿಂಗ್, ಪಾಸ್‌ಪೋರ್ಟ್ ಇತ್ಯಾದಿ ಯಾವುದೇ ಕಿರಿಕಿರಿ ಇಲ್ಲದೆ ಮೊನ್ನೆಯಷ್ಟೇ ಮೆಮೋರಿಯಲ್ ವೀಕೆಂಡ್ ಹೊತ್ತಿಗೆ ಬಂದ ಅವರ ಅಮೆರಿಕಾ ಪ್ರಯಾಣವೂ ಸುಗಮವಾಗಿ ಸಂಪೂರ್ಣವಾಯಿತು. ಇಲ್ಲಿದೆ ಕೆಳಗೆ ಓದಿ ನೋಡಿ... ಯಥಾವತ್ತಾದ ಅವರ ಅನುಭವ ‘ವರದಿ’!
ಹೀಗೆ ಆಗಿದ್ದು ತಿಮ್ಮರಾಯರ ‘ವೀಕೆಂಡ್ ಮಹಾತ್ಮೆ’ಯ ಶುಭೋದಯ!
***
‘ಇತಿ ಶ್ರೀ’ ತಿಮ್ಮರಾಯ ಉವಾಚ :
‘ವೀಕೆಂಡ್ ಮಹಾತ್ಮೆ’ ವರದಿ ಓದುತ್ತಿರುವ ಎಲ್ಲಾ ಕನ್ನಡಾಭಿಮಾನಿಗಳಿಗೆ ಗೊರನೂರು ತಿಮ್ಮರಾಯನ ನಮಸ್ಕಾರ!
ಸೀತ, ಅದೇ ನೆರೆಮನೆ ಶಾಂತಮ್ಮನ ಮಗಳು, ವರ್ಷಕ್ಕೊಮ್ಮೆ ಅಮೆರಿಕಾದಿಂದ ಒಂದು ತಿಂಗಳ ರಜೆಗೇ ಅಂತ ಬರ್ತಿದ್ಲು ... ಬಂದಾಗಲೆಲ್ಲ ನನ್ನ ಮನೆಗೆ ಭೇಟಿ ಕೊಟ್ಟು ಒಂದೆರಡು ಘಂಟೆ ನನ್ನತ್ರ ಹರಟೆ ಹೊಡೆಯದೆ ಹೋಗ್ತಿರ್ಲಿಲ್ಲ... ಇದರಿಂದಲೇ ನಂಗೆ ಅಮೆರಿಕಾದಲ್ಲಿ ಜನ ಹೇಗೆ ಇರ್ತಾರೆ... ಅವರ ದಿನಚರಿ ಸಾಮಾನ್ಯ ಹೇಗಿರುತ್ತೆ ಇತ್ಯಾದಿ ಎಲ್ಲ ವಿಷಯ ಗೊತ್ತಾಗಿದ್ದು..
ಅದರಲ್ಲೂ ಅಮೆರಿಕದಲ್ಲಿನ ಜನ ‘ವೀಕೆಂಡ್’ ಗೆ ಭಾರಿ ಮಹತ್ವ ಕೊಡ್ತಾರೆ ಅಂತಾನೂ ಗೊತ್ತು.. ವಾರವಿಡೀ ದುಡಿದ ಮೈಮನಕೆ ವಿಶ್ರಾಂತಿ ಬೇಕಲ್ವೇ?
ಸೀತ ಹೇಳಿದಾಗ ನಂಗೆ ಮೊದಲು ನಂಬಿಕೆನೇ ಬರ್ಲಿಲ್ಲ.. ಆದ್ರೆ ಮೊನ್ನೆ ಮೆಮೋರಿಯಲ್ ವೀಕೆಂಡಿಗೆ ಅಮೆರಿಕಾಕ್ಕೆ ಭೇಟಿ ಕೊಟ್ಟಾಗ ಸ್ವತಃ ಕಣ್ಣಾರೆ ನೋಡಿ ನಿಜ ಅನ್ನಿಸ್ತು...
ಬಾಪ್ ರೆ ಬಾಪ್... ಅಮೆರಿಕಾದಲ್ಲಿ ಇಷ್ಟೊಂದು ಜನಾನೂ ಇದ್ದಾರೆ ಅಂತ ವೀಕೆಂಡ್‌ನಲ್ಲಿ ಮಾತ್ರ ಗೊತ್ತಾಗುತ್ತೊ ಏನೋ.. ಅದರಲ್ಲೂ ಶಾಪಿಂಗ್ ಮಾಲ್, ಬೀಚ್‌ಗಳಿಗೆ ಹೋದ್ರೆ.. ನಂಗಂತೂ ‘ಚಿನ್ನಾರಿ ಮುತ್ತ’ ಸಿನೆಮಾದ ‘ಎಷ್ಟೊಂದು ಜನ ಇಲ್ಲಿ ಯಾರು ನನ್ನೋರು...’ ಹಾಡು ಜ್ಞಾಪಕಕ್ಕೆ ಬಂತು!!.
ಕೈಯಲ್ಲಿ ಕ್ಯಾಶ್ ಇಲ್ಲದಿದ್ರೆ ಏನಾಯ್ತು... ಕ್ರೆಡಿಟ್ ಕಾರ್ಡ್ ಇದೆಯಲ್ಲಾ... ಬಿಲ್ ಕಟ್ಟುವಾಗ ಆಲೋಚಿಸಿದ್ರೆ ಆಯ್ತು.. ಅಥವಾ ತೆಗೊಂಡ ವಸ್ತು ಇಷ್ಟ ಆಗಿಲ್ವಾ.. ಅದಕ್ಕೂ ತೊಂದರೆ ಇಲ್ಲ ಬಿಡಿ.. 15 ದಿವಸದೊಳಗೆ ವಾಪಸ್ ರಿಟರ್ನ್ ಮಾಡಿದ್ರೆ ಸರಿ...
ಈ ಕಂಪನಿಗಳಿಗೂ ಗೊತ್ತು ಬಿಸಿನೆಸ್ ಸ್ಟ್ರಾಟಜಿ... ಏನೇ ಡಿಸ್ಕೌಂಟ್ ಇರ್ಲಿ.. ಎಲ್ಲ ‘ವೀಕೆಂಡ್ ಸೇಲ್’! ಅದಕ್ಕೆ ತಾಳಕ್ಕೆ ತಾಳ ಸೇರಿಸಿದಾಂಗೆ ಎಲ್ಲಾ ಹಬ್ಬ-ರಾಜಕೀಯ ಆಚರಣೆಗಳೂ ‘ವೀಕೆಂಡ್’ ನಲ್ಲೇ. ಅದು ಅಪ್ಪಂದ್ರ ದಿನವಿರಲಿ ಅಥವಾ ಅಮ್ಮಂದಿರ ದಿನವಿರಲಿ...
ಸೆಲ್‌ಫೋನ್ ಕಂಪನಿಗಳೂ ಇದಕ್ಕೆ ಹೊರತಿಲ್ಲ... ಏನೇ ಪ್ಲಾನ್ ಇರಲಿ ದೊಡ್ಡಕ್ಷರದಿ Unlimited Weekend Minutes ಅಂತ ತಮ್ಮ ಜಾಹೀರಾತಿನಲ್ಲಿ ಬರೆಯೋಕ್ಕೆ ಮರೆಯಲ್ಲ.. ಟಿವಿ ನ್ಯೂಸ್, Weather Reportನಲ್ಲೂ ‘ವೀಕೆಂಡ್ ವೆದರ್’ಗೇ ಭಾರಿ ಒತ್ತು...
ಶುಕ್ರವಾರ ಬಂದರೆ ಸಾಕು ಎಲ್ಲ ಬಾಯಲ್ಲೂ ಒಂದೇ ಸಾಮಾನ್ಯ ಪ್ರಶ್ನೆ ‘ಈ ವೀಕೆಂಡ್ ಏನು ಮಾಡ್ತಾ ಇದ್ದೀರಿ ? ಏನು ಪ್ಲಾನ್?’ ಅಂತ...
ಅಲ್ಲಿಗೆ ಮುಗಿಯಿತೇ? ಇಲ್ಲ... ಸೋಮವಾರ ಮತ್ತೆ ಪ್ರಶ್ನೆ ‘ವೀಕೆಂಡ್ ಹೇಗಿತ್ತು ?’... ಅಪ್ಪಿತಪ್ಪಿ ಏನಾದ್ರೂ ಬಾಸ್ ಅಥವಾ ಮೇನೇಜರ್ ವೀಕೆಂಡ್ ಆಫೀಸಿಗೆ ಬರ್ಲಿಕ್ಕೆ ಅಂದ್ರೆ ಸಾಕು, ಎಲ್ಲಾ ಪ್ಲಾನ್ ಚೌಪಟ್... ಮನೆಯಲ್ಲಿ ಇರೋ ಹೆಂಡತಿಯರಿಂದ ಗಂಡಂದ್ರಿಗೆ ‘ಏನ್ರೀ, ವೀಕೆಂಡ್‌ನಲ್ಲೂ ನಿಮ್ಗೆ ಕೆಲಸ... ಎಲ್ಲೂ ಹೊರಗೆ ಹೋಗೋ ಹಾಂಗಾನೆ ಇಲ್ಲ’ ಎಂಬ ಗೋಳು ಬೇರೆ...
ನಾನು ಅಮೆರಿಕಾದಲ್ಲಿ ಇದ್ದ 4 ದಿನವೂ ಗುಜರಾತಿ ಪಟೇಲ್‌ನ ಮೊಟೇಲ್ ಒಂದರಲ್ಲಿ ತಂಗಿದ್ದೆ... ‘ಮೆಮೋರಿಯಲ್ ವೀಕೆಂಡ್ ಸ್ಪೆಶಲ್’ ಅಂತ ರೂಮಿನ ರೇಟಿನಲ್ಲೂ ಸಿಕ್ಕಿತ್ತು ಸ್ಪೆಶಲ್ ಡಿಸ್ಕೌಂಟ್!!
ಆ 4 ದಿನ ತುಂಬಾ ಮಜವಾಗಿತ್ತು... ಆದ್ರೂ ಜನ ‘ವೀಕೆಂಡ್’ಗೆ ಇಷ್ಟೊಂದು ಬೆಲೆ ಕೊಡೋಕೆ ವಾರ ತುಂಬಾ ಇರೋ ಕೆಲಸದ ಒತ್ತಡ ಮೂಲ ಕಾರಣವೇ? ಅಥವಾ ಬೇರೆ ಯಾವುದಾದ್ರೂ ಕಾರಣವಿದೆಯೇ ಅಂತ ನಿರ್ಧಾರಕ್ಕೆ ಬರಲು ನನಗೆ ಸಾಧ್ಯವೇ ಆಗಲಿಲ್ಲ... ನೀವು ಏನಂತೀರಾ ಇದಕ್ಕೆ?
‘ಇತಿಶ್ರೀ’ ತಿಮ್ಮರಾಯ ವಿರಚಿತ ‘ವೀಕೆಂಡ್ ಮಹಾತ್ಮೆ’ ವರದಿ ಸಂಪೂರ್ಣಮ್।।
***
ಹೇಗನ್ನಿಸಿತು ನಿಮಗೆ ತಿಮ್ಮರಾಯರ ‘ವೀಕೆಂಡ್ ಮಹಾತ್ಮೆ’ ? ಜೀವನದಲ್ಲಿ ಪ್ರಪ್ರಥಮ ಬಾರಿಗೆ ಬರೆದ ತಮ್ಮ ‘ಬರಹಾಯಣ’ ವಸ್ತು ‘ವೀಕೆಂಡ್ ಮಹಾತ್ಮೆ’ ಬಗ್ಗೆ ನಿಮ್ಮಂಥ ಪ್ರಿಯ ಓದುಗರ ಅನಿಸಿಕೆ ತಿಳಿಯಲು ತುಂಬಾ ಕುತೂಹಲದಿಂದಿದ್ದಾರೆ ತಿಮ್ಮರಾಯರು!!
ನಿಮ್ಮ ಅಭಿಪ್ರಾಯಗಳನ್ನು ತಿಳಿಸ್ತೀರಾ? ಮತ್ತೆ ಈ ವರದಿ ನನಗೆ ಹೇಗೆ ಸಿಕ್ತು ಅಂತ ನಿಮಗೆ ಕುತೂಹಲವೇ? ಅದೂ ಒಂದು ದೊಡ್ಡ ‘ತಲೆಹರಟೆ ಮಹಾತ್ಮೆ’ ಕಥೆ ಬಿಡಿ.. ಇನ್ನೊಮ್ಮೆ ಪುರುಸೊತ್ತಲ್ಲಿ ಹೇಳ್ತೇನೆ. ಆಗದೇ?
Tuesday, May 03, 2011
ಸತ್ಯ ಮಿಥ್ಯಗಳ ನಡುವೆ ಸಿಲುಕಿಹುದು ಈ ಮುಸ್ಸಂಜೆ !
[ From Old Archive ]
ಅದೊಂದು ಸುಂದರವಾದ ಭಾನುವಾರದ ಮುಸ್ಸಂಜೆಯ ಹೊತ್ತು . ವಾರಾಂತ್ಯದ ರೂಢಿಯಂತೆ ಸಬ್ಜಿಮಂಡಿಯಿಂದ ದಿನಸಿ ಖರೀದಿ ಮುಗಿಸಿ ಮನೆಗೆ ವಾಪಾಸು ಬರುತ್ತಿದ್ದೆ. ಆಗಸದತ್ತ ನೋಡಿದರೆ ರಂಗು ರಂಗಿನ ರಂಗೋಲಿ ಬಣ್ಣದ ಓಕುಳಿಯಾಡಿದಂತಿತ್ತು . ಸುತ್ತಮುತ್ತಲ ಆ ವಾತಾವರಣ ನನ್ನಲ್ಲಿ ಹೊಸ ಸ್ಫೂರ್ತಿ ಮೂಡಿಸಿತು. ಮನದಾಳದಲ್ಲಿ ಯೋಚನೆಗಳ ಆಗರವೇ ತುಂಬಲಾರಂಭಿಸಿತು...
ದಿನದ ವಿವಿಧ ಹಂತ ಗತಿಗಳನ್ನು ಆಳವಾಗಿ ನೋಡಿದರೆ ಜೀವನದ ‘ಬಾಲ್ಯ’ವು ದಿನದ ‘ಮುಂಜಾನೆ’ಯಾದರೆ, ‘ಯೌವನ’ವನ್ನು ‘ಮಧ್ಯಾಹ್ನ’ವೆನ್ನಬಹುದು. ‘ಮುಪ್ಪು, ಮುದಿತನ’ವನ್ನು ಬಾಳಿನ ‘ಸಂಜೆ’ ಎನ್ನಬಹುದು ಅಲ್ವೇ?
ಇಲ್ಲಿ ಒಂದು ವಿಷಯ ಗಮನಿಸಿದಿರಾ ? ಮನುಷ್ಯನ ಬದುಕಿನಲ್ಲಿ ‘ಯೌವನ’ ವು ರಂಗು ರಂಗಿನ ಭಾಗವಾದರೆ, ದಿನದ ‘ಮಧ್ಯಾಹ್ನ’ ಬಿಸಿಲು ಧಗೆಯಿಂದ ಕೂಡಿರುವುದು! ಅದೇ ‘ಸಂಜೆ’ ವಿಧವಿಧದ ಬಣ್ಣ ಚೆಲ್ಲಿ, ತಂಪು ತಂಗಾಳಿಯನ್ನು ಬೀಸಿ ಮನಕ್ಕೆ ಮುದ ನೀಡುವುದು. ಎಂಥಾ ವೈಪರೀತ್ಯವಿದು?
ಬೆಳಕು - ಕತ್ತಲೆಗಳ ವಾಸ್ತವಿಕತೆಗಳ ನಡುವೆ ಬರುವ ಈ ತಂಪಿನ ಮುಸ್ಸಂಜೆ ಒಂದು ಭ್ರಮಾಲೋಕವಿದ್ದಂತೆ. ಹೀಗೆಯೇ ಅಲ್ಲವೇ ನಮ್ಮ ಜೀವನ ಕೂಡಾ? ಬದುಕಲ್ಲಿ ಹುಟ್ಟು-ಸಾವು, ಆದಿ-ಅಂತ್ಯಗಳು ವಾಸ್ತವ-ನಿಜವಾದರೂ, ಇವೆರಡರ ನಡುವೆ ಮನುಜನದು ಕನಸುಗಳ ನನಸು ಮಾಡುವತ್ತ ನಡೆದಾಟ, ಅಲೆದಾಟ... ಅದಕ್ಕಾಗಿಯೇ ಕೆಲವೊಮ್ಮೆ ಹೊಡೆದಾಟ...
‘ಸತ್ಯ ಮಿಥ್ಯಗಳ ನಡುವೆ ಸಿಲುಕಿಹುದು ದಿನ ಬದುಕು
ಕೈಗೆಟುಕದ ನಕ್ಷತ್ರಕೆ ಬೇಡಿಹುದು ಮನ ಸಹಜ
ನಕ್ಷತ್ರಿಕ ಬಿಡನಿವನು ಆಸೆಗಳ ಬೆಂಬತ್ತಿ
ಮಾಯಾ ಮರೀಚಿಕೆಗೆ ತಹತಹಿಸಿ ತೊಳಲಾಡೆ
ನಿನಗೆಲ್ಲಿ ನೆಮ್ಮದಿಯು ಹೇಳು ಮನುಜ?’
ಕಣ್ಣಿಗೆ ತೋರುವಂಥವು, ಅನುಭವಕ್ಕೆ ಬರುವಂಥವು ಮಾತ್ರ ನಿಜ, ಉಳಿದೆಲ್ಲವೂ ಸುಳ್ಳು ಅಂದರೆ ಅದೂ ಅರ್ಧ ಸತ್ಯ- ನಾಣ್ಯದ ಒಂದು ಮುಖವಿದ್ದಂತೆ. ಇನ್ನೊಂದು ಮುಖದ ಪರಿಚಯವಾಗುವುದು ಕಣ್ಣಿಗೆ ಕಾಣಲಾರದ ‘ಸತ್ಯ’ ವಿರಬಹುದೇ?
ಸ್ವಾಮಿ ಸಂತರು ಬುಧ್ಧಿಜೀವಿಗಳು ಕಂಡುಕೊಂಡ ಈ ಜ್ಞಾನಸತ್ಯದ ಬಗ್ಗೆ ಮಾತಾಡುವುದು ಖಂಡಿತಾ ಈ ಲೇಖನದ ಉದ್ದೇಶವಲ್ಲ . ಜೀವನದ ಔನ್ನತ್ಯದ ಆಳವನ್ನಿರಿಯಲು ವಾಸ್ತವಿಕತೆ - ಭ್ರಮೆ ಇವೆರಡರ ಅರಿವು ಬೇಕೇ ಬೇಕು ಎಂದು ವಿವರಿಸುವ ಪ್ರಯತ್ನವೇ ಈ ಅಕ್ಷರ ರೂಪ. ‘ಇರುವುದೆಲ್ಲವ ಬಿಟ್ಟು ಇರದುದರೆಡಗೆ ನಡೆವುದೆ ಜೀವನ ’ ಎಂಬ ಚಂಡೆಮದ್ದಳೆಯ ಕವಿ ಗೋಪಾಲಕೃಷ್ಣ ಅಡಿಗರ ‘ಮೋಹನಮುರಳಿ’ ಪದ್ಯದ ಸಾಲುಗಳು ಒಂದರ್ಥದಲ್ಲಿ ಇದೇ ವಿಷಯದ ಮರ್ಮವ ಸಾರುತ್ತವೆಂದು ನನ್ನನಿಸಿಕೆ.
ಸತ್ಯದ ಬೆಲೆಯನ್ನಿರಿಯಲು ಸುಳ್ಳು ಯಾವುದು ಎಂದು ತಿಳಿವುದು ಎಷ್ಟು ಮುಖ್ಯವೋ, ನ್ಯಾಯ - ಅನ್ಯಾಯ, ಬೆಳಕು - ಕತ್ತಲೆ, ವಾಸ್ತವ - ಭ್ರಮೆ ... ಇತ್ಯಾದಿಯೆಲ್ಲವೂ ಸರಿಸಮಾನತೆಯ ಎರಡು ಅವಿಭಾಜ್ಯ ಮುಖಗಳು ಅನ್ನೋದು ದಿಟವಲ್ವೇ?
ಕಾರು ಮನೆ ಮುಂದೆ ನಿಂತಾಗಲೇ ನನ್ನ ಯೋಚನಾಧಾರೆಗೆ ಕ್ಷಣಿಕ ಕಾಲದ ಕಡಿವಾಣ ಬಿದ್ದದ್ದು ! ಮತ್ತೆ ಭ್ರಮೆಯಿಂದ ವಾಸ್ತವಿಕತೆಯ ಕಡೆ ಪಯಣ... ಮರಳಿ ಕನಸುಗಳ ಗೂಡಿಗೆ..

Subscribe to:
Posts (Atom)